ಪರಿಶಿಷ್ಟರ ಕಲ್ಯಾಣ ನಿಧಿಯನ್ನು ಗೋವು, ಧಾರ್ಮಿಕ ಕೇಂದ್ರಗಳಿಗೆ ವೆಚ್ಚ ಮಾಡಿದ ಮಧ್ಯಪ್ರದೇಶ
ಭೋಪಾಲ್: ಕೇಂದ್ರ ಸರ್ಕಾರದ ಅನುದಾನಿತ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿ ಇರುವ ನಿಧಿಯನ್ನು ಮಧ್ಯಪ್ರದೇಶ ಸರ್ಕಾರ ಧಾರ್ಮಿಕ ಕೇಂದ್ರಗಳು ಮತ್ತು ಮ್ಯೂಸಿಯಂ ಅಭಿವೃದ್ಧಿ, ಗೋವುಗಳ ಕಲ್ಯಾಣಕ್ಕೆ ಬಳಕೆ ಮಾಡಿಕೊಂಡಿರುವ ಅಂಶ ಬಹಿರಂಗವಾಗಿದೆ.
ಆದರೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆ ಕೂಡಾ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ರಾಜ್ಯ ಹಣಕಾಸು ಸಚಿವ ಜಗದೀಶ್ ದೇವ್ದಾ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
'ಹಿಂದೂಸ್ತಾನ್ ಟೈಮ್ಸ್'ಗೆ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಗೋ ಸಂವರ್ಧನೆ ಮತ್ತು ಪಶು ಸಂವರ್ಧನೆ ಯೋಜನೆಯಡಿ ಗೋ ಕಲ್ಯಾಣಕ್ಕೆ ನಿಗದಿಯಾಗಿದ್ದ 252 ಕೋಟಿ ರೂಪಾಯಿಗಳಲ್ಲಿ 96.76 ಕೋಟಿ ರೂಪಾಯಿಗಳನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ನಿಧಿಯಿಂದ ಬಳಸಿಕೊಳ್ಳಲಾಗಿದೆ. ಗೋ ಕಲ್ಯಾಣ ನಿಧಿಯನ್ನು ಕಳೆದ ವರ್ಷಕ್ಕಿಂತ 90 ಕೋಟಿ ರೂಪಾಯಿಯಷ್ಟು ಹೆಚ್ಚಿಸಲಾಗಿದೆ.
ಆರು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಬಳಸಲಾದ ಅರ್ಧದಷ್ಟು ಹಣವನ್ನು ಕೂಡಾ ಎಸ್ಸಿ/ಎಸ್ಟಿ ಉಪಯೋಜನೆಯಿಂದ ಬಳಸಿಕೊಳ್ಳಲಾಗಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ ನಲ್ಲಿ ರಾಜ್ಯ ಸರ್ಕಾರ, ಸಲ್ಕನ್ ಪುರದ ಶ್ರೀದೇವಿ ಮಹಾಲೋಕ, ಸಾಗರದಲ್ಲಿ ಸಂತ ಶ್ರೀ ರವಿದಾಸ್ ಮಹಾಲೋಕ, ಓರ್ಚಾದಲ್ಲಿ ಶ್ರೀರಾಮರಾಜ ಮಹಾಲೋಕ, ಚಿತ್ರಕೂಟದಲ್ಲಿ ಶ್ರೀ ರಾಮಚಂದ್ರ ವನವಾಸಿ ಮಹಾಲೋಕ ಮತ್ತು ಗ್ವಾಲಿಯರ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸ್ಮಾರಕ ನಿರ್ಮಾಣಕ್ಕೆ 109 ಕೋಟಿ ರೂಪಾಯಿ ಘೋಷಣೆ ಮಾಡಿತ್ತು.
ಮಧ್ಯಪ್ರದೇಶವು ಕರ್ನಾಟಕ ಬಳಿಕ ಎಸ್ಸಿ/ಎಸ್ಟಿ ನಿಧಿಯನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿರುವ ಎರಡನೇ ರಾಜ್ಯವಾಗಿದೆ. ಕರ್ನಾಟಕ ಸರ್ಕಾರ ಕಲ್ಯಾಣ ಯೋಜನೆಗಳಿಗಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಈ ಉಪಯೋಜನೆಯಿಂದ ವರ್ಗಾಯಿಸಿತ್ತು.