ಮಧ್ಯಪ್ರದೇಶ | ಬಾವಿಯೊಳಗೆ ವಿಷಾನಿಲ ಸೇವಿಸಿ ನಾಲ್ವರ ಮೃತ್ಯು
ಭೋಪಾಲ್ : ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಬಾವಿಯೊಂದರಲ್ಲಿ ಶಂಕಿತ ವಿಷಾನಿಲ ಸೇವನೆಯಿಂದ ನಾಲ್ವರು ಮೃತಪಟ್ಟಿದ್ದಾರೆ.
ಜುಹ್ಲಿ ಗ್ರಾಮದಲ್ಲಿಯ ಬಾವಿಯೊಂದರಲ್ಲಿ ನೀರೆತ್ತುವ ಪಂಪ್ ಅಳವಡಿಸಲಾಗಿತ್ತು.ಮಳೆಯಿಂದಾಗಿ ಬಾವಿಯಲ್ಲಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದ್ದು,ಗುರುವಾರ ಅದನ್ನು ಹೊರತೆಗೆಯಲು ಪಿಂಟು ಕುಶ್ವಾಹ ಎಂಬಾತ ಬಾವಿಗಿಳಿದ ಬಳಿಕ ಪ್ರಜ್ಞಾಹೀನನಾಗಿದ್ದರು ಎಂದು ಪೋಲಿಸರು ತಿಳಿಸಿದರು.
ಪಿಂಟುವನ್ನು ರಕ್ಷಿಸಲು ರಾಜಕುಮಾರ ದುಬೆ, ಅವರ ಸೋದರಪುತ್ರ ನಿಖಿಲ್ ದುಬೆ ಮತ್ತು ರಾಜೇಶ ಕುಶ್ವಾಹ ಬಾವಿಗೆ ಇಳಿದಿದ್ದರು. ಆದರೆ ಅವರೂ ಪ್ರಜ್ಞಾಹೀನರಾಗಿದ್ದರು.
ಗ್ರಾಮಸ್ಥರಿಂದ ಮಾಹಿತಿ ಪಡೆದ ಪೋಲಿಸರು ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯಾ ಪಡೆ ಮತ್ತು ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ನಾಲ್ಕೂ ಶವಗಳನ್ನು ಬಾವಿಯಿಂದ ಹೊರಕ್ಕೆ ತೆಗೆದಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿಯಂತೆ ನಾಲ್ವರೂ ಬಾವಿಯೊಳಗೆ ವಿಷಾನಿಲ,ಬಹುಶಃ ಮಿಥೇನ್ ಸೇವಿಸಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಸಾವುಗಳಿಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ವಿಧಿವಿಜ್ಞಾನ ತಂಡವು ನೀರು ಮತ್ತು ಅನಿಲದ ಸ್ಯಾಂಪಲ್ಗಳನ್ನು ಸಂಗ್ರಹಿಸಿದೆ ಎಂದು ಪೋಲಿಸರು ತಿಳಿಸಿದರು.
ಈ ನಡುವೆ ಘಟನೆಯ ಕುರಿತು ಸಂತಾಪಗಳನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ.