ಮುಖ್ಯಮಂತ್ರಿ ಶಿಂದೆಯನ್ನು ‘ದ್ರೋಹಿ’ ಎಂದು ಕರೆದ ವ್ಯಕ್ತಿ; ಆಕ್ರೋಶಗೊಂಡ ಮಹಾರಾಷ್ಟ್ರ ಸಿಎಂ ಮಾಡಿದ್ದೇನು?; ವಿಡಿಯೋ ವೈರಲ್
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವಾರ ಬಾಕಿಯಿರುವಾಗ ಇಲ್ಲಿಯ ಸಾಕಿನಾಕಾ ಪ್ರದೇಶದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬೆಂಗಾವಲು ವಾಹನಗಳಿಗೆ ತಡೆಯೊಡ್ಡಿದ ವ್ಯಕ್ತಿಯೋರ್ವ ಶಿವಸೇನೆಯನ್ನು ಒಡೆದಿದ್ದಕ್ಕಾಗಿ ಮತ್ತು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಕ್ಕಾಗಿ ಅವರನ್ನು ‘ಗದ್ದಾರ್(ದ್ರೋಹಿ) ’ಎಂದು ಕರೆದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ನಸೀಮ್ ಖಾನ್ ಅವರ ಕಚೇರಿಯ ಎದುರು ಸೋಮವಾರ ಈ ಘಟನೆ ನಡೆದಿದೆ. ಶಿಂದೆ ಶಾಸಕ ದಿಲೀಪ್ ಲಾಂಡೆ ಪರವಾಗಿ ಕಾಂದಿವಲಿಯಲ್ಲಿ ಪ್ರಚಾರ ನಡೆಸುತ್ತಿದ್ದರು.
ಸಂತೋಷ ಕಟಕೆ ಎಂಬ ಯುವಕ ಕಪ್ಪು ಧ್ವಜವನ್ನು ಬೀಸುವ ಮೂಲಕ ಶಿಂದೆಯವರ ಬೆಂಗಾವಲು ಪಡೆಗೆ ಅಡ್ಡಿಯುಂಟು ಮಾಡಿದ್ದನ್ನು ಮತ್ತು ಅವರನ್ನು ದ್ರೋಹಿ ಎಂದು ಕರೆದಿದ್ದನ್ನು ವೀಡಿಯೊ ತೋರಿಸಿದೆ.
ಕುಪಿತ ಶಿಂದೆ ತನ್ನ ಕಾರಿನಿಂದ ಇಳಿದು ನೇರವಾಗಿ ಖಾನ್ ಕಚೇರಿಯನ್ನು ಪ್ರವೇಶಿಸಿ ಅವರ ವರ್ತನೆಯ ಕುರಿತು ಅಲ್ಲಿದ್ದವರನ್ನು ಪ್ರಶ್ನಿಸಿದರು. ‘ನೀವು ಇದನ್ನೇ ಕಲಿಸುತ್ತೀರಾ?’ ಎಂದು ಅವರು ಕೂಗಾಡಿದ್ದು ವೀಡಿಯೊದಲ್ಲಿ ಕೇಳಿಬಂದಿದೆ.
ಅಲ್ಲಿದ್ದವರು ಕಟಕೆಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದರು,ಸ್ವಲ್ಪ ಸಮಯದ ಬಳಿಕ ಪೋಲಿಸರು ಆತನನ್ನು ಬಿಟ್ಟು ಕಳುಹಿಸಿದರು.
ನಂರತ ಸುದ್ದಿಗಾರರೊಂದಿಗೆ ಮಾತನಾಡಿದ ಕಟಕೆ,‘ಶಿಂದೆಯವರನ್ನು ಕಂಡ ತಕ್ಷಣ ನನ್ನಲ್ಲಿ ಹುದುಗಿದ್ದ ಕೋಪವು ಸ್ಫೋಟಗೊಂಡಿತ್ತು ಮತ್ತು ಆ ಮಾತುಗಳನ್ನು ಹೇಳಲು ಪ್ರೇರೇಪಿಸಿತ್ತು, ನಾನು ಶಿವಸೇನೆಯ ಕಟ್ಟಾ ಬೆಂಬಲಿಗನಾಗಿದ್ದೇನೆ ಮತ್ತು ನಾನು ಪ್ರತಿಭಟಿಸಲೇಬೇಕಿತ್ತು’ ಎಂದು ಹೇಳಿದ.
ಬುಧವಾರ ಕಟಕೆ ಮತ್ತು ಆತನ ತಂದೆ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಶಿವಸೇನೆ (ಯುಬಿಟಿ)ಗೆ ಸೇರಿದರು. ಈ ಸಂದರ್ಭ ತಂದೆ-ಮಗನನ್ನು ಠಾಕ್ರೆ ಸನ್ಮಾನಿಸಿದರು.