VIDEO| ಕಾರಿನ ಮೇಲಿನಿಂದ ನೋಟುಗಳನ್ನು ಎಸೆದ ಯುವಕ

Update: 2023-10-03 16:49 GMT

PHOTO : Videograb

ಜೈಪುರ: ನೆಟ್ ಫ್ಲಿಕ್ಸ್ ಒಟಿಟಿಯ ಜನಪ್ರಿಯ ಸರಣಿಯಾದ ‘ಮನಿ ಹೇಯ್ಸ್ಟ್’ನ ಪಾತ್ರವೊಂದು ಧರಿಸಿರುವ ಕೆಂಪು ಬಣ್ಣದ ದಿರಿಸನ್ನು ಧರಿಸಿಕೊಂಡು, ತನ್ನ ಕಾರಿನ ಮೇಲಿಂದ ನೋಟನ್ನು ಎಸೆಯುತ್ತಿರುವ ಜೈಪುರ ಯುವಕನೊಬ್ಬನ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು timesnownews.com ವರದಿ ಮಾಡಿದೆ.

ಈ ವಿಚಿತ್ರ ವರ್ತನೆಯು ಸಾರ್ವಜನಿಕರಲ್ಲಿ ಗಾಬರಿ ಹುಟ್ಟಿಸಿದ್ದು, ಸಂಚಾರ ದಟ್ಟಣೆಗೂ ಕಾರಣವಾಗಿದೆ. ಈ ಘಟನೆಯು ಜೈಪುರದ ಮಾಳವಿಯಾ ನಗರದಲ್ಲಿನ ಗೌರವ್ ಟವರ್ ಬಳಿ ನಡೆದಿದೆ ಎಂದು ವರದಿಯಾಗಿದೆ.

ಈ ವೀಡಿಯೊ ವೈರಲ್ ಆದ ನಂತರ, ಘಟನೆಯಲ್ಲಿ ಭಾಗಿಯಾಗಿದ್ದ ಯುವಕನನ್ನು ಜೈಪುರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಜ್ಞಾನಚಂದ್ ಯಾದವ್ ಬಂಧಿಸಿದ್ದಾರೆ. ಆ ಯುವಕನ ಎಸೆದಿದ್ದ ನೋಟಿನ ಮುಖಬೆಲೆಯು ರೂ. 10 ಮತ್ತು ರೂ. 20ರದಾಗಿತ್ತು.

ಇಂತಹ ಅಸಹಜ ಕೃತ್ಯವನ್ನು ನಡೆಸಲು ಆ ಯುವಕನು ತನ್ನ ತಂದೆಯ ಕಾರನ್ನು ತಂದಿದ್ದ ಎಂದು ಹೇಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, “ನಾನು ಕೇವಲ ತಮಾಷೆಗಾಗಿ ಈ ಕೃತ್ಯವನ್ನು ಮಾಡಿದೆ” ಎಂದು ಆ ಯುವಕನು ಹೇಳಿಕೆ ನೀಡಿದ್ದಾನೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಘಟನೆಯ ಸಂದರ್ಭದಲ್ಲಿ ಆತನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಇದರಿಂದ ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ಪೊಲೀಸರು ಯುವಕನು ಎಸೆದಿರುವ ನೋಟುಗಳ ಸಾಚಾತನವನ್ನೂ ಪರಿಶೀಲಿಸುತ್ತಿದ್ದು, ಆ ನೋಟುಗಳು ಅಸಲಿಯೋ ಅಥವಾ ನಕಲಿಯೋ ಎಂದು ಪರಿಶೀಲಿಸುತ್ತಿದ್ದಾರೆ.

‘ಮನಿ ಹೇಯ್ಸ್ಟ್’ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿನ ಜನಪ್ರಿಯ ಸರಣಿಯಾಗಿದೆ. ಈ ಸರಣಿಯು ಮೂಲತಃ ಸ್ಪ್ಯಾನಿಶ್ ಭಾಷೆಯಲ್ಲಿ “ಲಾ ಕಾಸಾ ಡಿ ಪಾಪೆಲ್” ಎಂಬ ಶೀರ್ಷಿಕೆ ಹೊಂದಿದೆ. ಈ ಜನಪ್ರಿಯ ಸ್ಪ್ಯಾನಿಶ್ ದೂರದರ್ಶನ ಧಾರಾವಾಹಿಯನ್ನು ಅಲೆಕ್ಸ್ ಪಿನಾ ನಿರ್ದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News