ಸಂದರ್ಶಕರಿಗೆ ಕಡ್ಡಾಯ ಪಾಸ್, 24*7 ಭದ್ರತೆ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ಕೇಂದ್ರದಿಂದ ರಾಜ್ಯಗಳಿಗೆ ಆದೇಶ ಪತ್ರ
ಹೊಸದಿಲ್ಲಿ: ಆಸ್ಪತ್ರೆ ಮತ್ತಿತರ ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯರ ವಿರುದ್ಧ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವುದನ್ನು ಪರಿಗಣನೆಗೆ ತೆಗೆದುಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಂದರ್ಶಕರಿಗೆ ಕಡ್ಡಾಯ ಪಾಸ್, ದಿನದ 24 ತಾಸುಗಳ ಕಾಲವೂ ಕಣ್ಗಾವಲು ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಬುಧವಾರ ಪತ್ರವನ್ನು ಬರೆದಿದೆ.
ತಮ್ಮ ಕೆಲಸದ ಸ್ಥಳಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಕುರಿತ ಕಳವಳಗಳನ್ನು ನೀಗಿಸಲು ರಾಷ್ಟ್ರೀಯ ಕಾರ್ಯಪಡೆಯ ವರದಿ ಬರುವವರೆಗೆ ಕೆಲವು ನಿರ್ದಿಷ್ಟ ಮೂಲಭೂತ ಸುರಕ್ಷತಾ ಅವಶ್ಯಕತೆಗಳನ್ನು ಈಡೇರಿಸಬೇಕೆಂದು ಪತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ತಿಳಿಸಲಾಗಿದೆ.
ಪರಿಸ್ಥಿತಿಯ ತೀವ್ರತೆಯನ್ನು ಗಮನಕ್ಕೆ ತೆಗೆದುಕೊಂಡು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಸಂಬಂಧಿಸಿ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಚಿವಾಲಯವು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.
ರಾಜ್ಯ ಸರಕಾರಗಳಿಗೆ ಆರೋಗ್ಯ ಸಚಿವಾಲಯದ ನಿರ್ದೇಶನಗಳು:
1. ಆರೋಗ್ಯಪಾಲನಾ ಕಾರ್ಯಕರ್ತರ ಭದ್ರತೆಯನ್ನು ಹೆಚ್ಚಿಸಬೇಕು ಹಾಗೂ ಅವರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ಒದಗಿಸಬೇಕು.
2. ಆರೋಗ್ಯಪಾಲನಾ ಉದ್ಯೋಗಿಗಳ ಸುರಕ್ಷತೆ ಕುರಿತ ಕಾನೂನುಗಳು ಹಾಗೂ ಇದನ್ನು ಉಲ್ಲಂಘಿಸಿದವರಿಗೆ ಭಾರತೀಯ ನ್ಯಾಯ ಸಂಹಿತೆಯಡಿಯ ವಿವಿಧ ಸೆಕ್ಷನ್‌ಗಳಲ್ಲಿನ ಶಿಕ್ಷೆ ಹಾಗೂ ದಂಡ ಕುರಿತು ವಿವರಗಳನ್ನು ಭಾರತೀಯ ನ್ಯಾಯ ಸಂಹಿತೆಯ ಆಸ್ಪತ್ರೆಯ ಆವರಣಗಳ ಒಳಗೆ ಸ್ಥಳೀಯ ಭಾಷೆ ಹಾಗೂ ಇಂಗ್ಲೀಷ್‌ನಲ್ಲಿ ಪ್ರದರ್ಶಿಸಬೇಕು.
3. ಸೂಕ್ತ ಭದ್ರತಾ ಕ್ರಮಗಳನ್ನು ರೂಪಿಸಲು ಹಾಗೂ ಅವುಗಳ ಅನುಷ್ಠಾನಕ್ಕಾಗಿ ಹಿರಿಯ ವೈದ್ಯರು ಹಾಗೂ ಆಡಳಿತಾತ್ಮಕ ಅಧಿಕಾರಿಗಳನ್ನು ಒಳಗೊಂಡ ಆಸ್ಪತ್ರೆ ಭದ್ರತಾ ಸಮಿತಿ ಹಾಗೂ ಹಿಂಸಾಚಾರ ತಡೆ ಸಮಿತಿಯ ರಚನೆ.
4. ವೈದ್ಯಕೀಯ ಸಿಬ್ಬಂದಿಯ ವಸತಿ ಹಾಗೂ ಹಾಸ್ಟೆಲ್ ಕಟ್ಟಡಗಳು ಹಾಗೂ ಆಸ್ಪತ್ರೆಯ ಆವರಣದಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆಯನ್ನು ಮಾಡಬೇಕು.
5. ದಿನದ 24 ತಾಸುಗಳ ಕಾಲವೂ ಆಸ್ಪತ್ರೆಗಳ ಭದ್ರತಾ ಕಣ್ಗಾವಲಿಗೆ ನಿಯಂತ್ರಣ ಕೊಠಡಿ. ರಾತ್ರಿ ವೇಳೆ ಆಸ್ಪತ್ರೆಯ ಆವರಣದಲ್ಲಿ ಭದ್ರತಾ ಗಸ್ತು.
6. ಸಮೀಪದ ಪೊಲೀಸ್ ಠಾಣೆಯೊಂದಿಗೆ ನಿಕಟವಾದ ಸಂಪರ್ಕ.
7. ಆಸ್ಪತ್ರೆಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಆಂತರಿಕ ಸಮಿತಿ ರಚನೆ
8. ಆಸ್ಪತ್ರೆಯ ಆವರಣದೊಳಗೆ ಸಿಸಿಟಿವಿ ಕ್ಯಾಮರಾಗಳ ನಿಗಾವಣೆ.
9. ಆಸ್ಪತ್ರೆಯ ಪ್ರಮುಖ ಸ್ಥಳಗಳಿಗೆ ಬಾಹ್ಯವ್ಯಕ್ತಿಗಳು ಹಾಗೂ ರೋಗಿಗಳ ಸಂಬಂಧಿಕರ ಪ್ರವೇಶಕ್ಕೆ ನಿರ್ಬಂಧ ಹಾಗೂ ಕಡ್ಡಾಯ ಪಾಸ್ ವ್ಯವಸ್ಥೆ.
10. ಆಸ್ಪತ್ರೆಯ ಆವರಣದಲ್ಲಿರುವ ಸಿಸಿಟಿವಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ಹಾಗೂ ಅವುಗಳನ್ನು ಮೇಲ್ದರ್ಜೆಗೇರಿಸುವುದು.