ಜೂನ್ 4ರಿಂದ ಮರಾಠ ಮೀಸಲಾತಿ ಹೋರಾಟ ಪುನರಾರಂಭವಾಗಲಿದೆ : ಜಾರಂಗೆ ಎಚ್ಚರಿಕೆ

Update: 2024-05-14 16:29 GMT

ಮನೋಜ್ ಜರಂಗೆ | PC : PTI 

ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಜೂನ್ 4ರಂದು ಮರಾಠ ಮೀಸಲಾತಿ ಹೋರಾಟವು ಪುನಾರಂಭಗೊಳ್ಳಲಿದೆ ಎಂದು ಮಂಗಳವಾರ ಹೋರಾಟಗಾರ ಮನೋಜ್ ಜಾರಂಗೆ ಎಚ್ಚರಿಸಿದರು.

ಸರಕಾರಿ ಉದ್ಯೋಗಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕು ಎಂಬ ಬೇಡಿಕೆಗಾಗಿ ಮತ್ತಷ್ಟು ಒತ್ತಡ ಹೇರಲು ಜೂನ್ 8ರಂದು ಸಮಾವೇಶವೊಂದನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಕಳೆದ ವರ್ಷದಿಂದ ಮರಾಠ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಜಾರಂಗೆ, 17ನೇ ಶತಮಾನದ ಆಡಳಿತಗಾರರಾದ ಛತ್ರಪತಿ ಸಂಭಾಜಿ ಮಹಾರಾಜ್ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮಗೆ ನಮ್ಮ ಮಕ್ಕಳಿಗೆ ಮೀಸಲಾತಿ ಬೇಕಿದೆ. ನಮಗೆ ಆರ್ಥಿಕವಾಗಿ ಹಿಂದುಳಿದಿರುವ ಪ್ರವರ್ಗದಲ್ಲಿ ಶೇ. 10ರಷ್ಟು ಮೀಸಲಾತಿ ನೀಡಲಾಗಿದ್ದರೂ, ಅದರಿಂದ ಯಾವುದೇ ಉಪಯೋಗವಾಗಿಲ್ಲ. ಇದು ಸದ್ಯ ನಡೆಯುತ್ತಿರುವ ಪೊಲೀಸ್ ನೇಮಕಾತಿಯಲ್ಲಿ ಸಾಬೀತಾಗಿದೆ” ಎಂದು ತಿಳಿಸಿದರು.

“ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವ ಮೂಲಕ ಜೂನ್ 4ರ ಬೆಳಗ್ಗೆ 9 ಗಂಟೆಯಿಂದ ನಾವು ಹೋರಾಟವನ್ನು ಪುನಾರಂಭಗೊಳಿಸಲಿದ್ದೇವೆ. ಈ ಹೋರಾಟವು ಶಾಂತಿಯುತವಾಗಿರಲಿದೆ” ಎಂದು ಹೇಳಿದ ಜರಂಗೆ, ಅದಕ್ಕೂ ಮುನ್ನವೇ ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಲಿ ಎಂದು ಕರೆ ನೀಡಿದರು.

“ಒಂದು ವೇಳೆ ಕುಣಬಿ ಜಾತಿ ಪ್ರಮಾಣ ಪತ್ರ ಪಡೆದಿರುವ ಮರಾಠರ ಸಂಬಂಧಿಗಳಿಗೆ ಸರಕಾರವೇನಾದರೂ ಕುಣಬಿ ಜಾತಿ ಪ್ರಮಾಣ ಪತ್ರವನ್ನು ನೀಡದಿದ್ದರೆ, ನಾವೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ” ಎಂದೂ ಅವರು ಎಚ್ಚರಿಸಿದರು.

ಮಹಾರಾಷ್ಟ್ರದಲ್ಲಿ ಕೃಷಿಕ ಕುಣಬಿ ಸಮುದಾಯವು ಇತರೆ ಹಿಂದುಳಿದ ವರ್ಗಗಳ ಗುಂಪಿನ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News