ತೆಲಂಗಾಣ: ಪ್ರಾಣಿಬಲಿ ಆರೋಪದಲ್ಲಿ ಮದರಸದ ಮೇಲೆ ಗುಂಪು ದಾಳಿ, ಹಲವರಿಗೆ ಗಾಯ
ಹೈದರಾಬಾದ್: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಶನಿವಾರ ಗುಂಪೊಂದು ಪ್ರಾಣಿಬಲಿ ಆರೋಪದಲ್ಲಿ ಮದರಸದ ಮೇಲೆ ದಾಳಿಯನ್ನು ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಿರಾಜ್ ಉಲ್ ಉಲೂಮ್ ಮದರಸದ ಆಡಳಿತ ಸಮಿತಿಯು ಬಕ್ರೀದ್‌ಗೆ ಬಲಿ ನೀಡಲು ಜಾನುವಾರೊಂದನ್ನು ಖರೀದಿಸಿತ್ತು. ಅವರು ಜಾನುವಾರನ್ನು ಮದರಸದ ಆವರಣದೊಳಗೆ ತಂದ ಬೆನ್ನಿಗೇ ಅಲ್ಲಿ ಜಮಾಯಿಸಿದ್ದ ಗುಂಪು ಪ್ರಾಣಿಬಲಿ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿತ್ತು. ಪೋಲಿಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿದ್ದರು.
TOI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಸ್‌ಪಿ ಬಾಲಸ್ವಾಮಿಯವರು, ಮೂರು ಬೇರೆ ಬೇರೆ ಸ್ಥಳಗಳಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳಿಂದಾಗಿ ಮೇಡಕ್‌ನಲ್ಲಿ ಉದ್ವಿಗ್ನತೆ ತಲೆದೋರಿತ್ತು. ಆರಂಭದಲ್ಲಿ ಬಕ್ರೀದ್ ಸಂದರ್ಭದಲ್ಲಿ ಬಲಿಗಾಗಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಹಿಂಸಾಚಾರ ಆರಂಭಗೊಂಡಿತ್ತು,ಬಳಿಕ ಎರಡು ವಿಭಿನ್ನ ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ. ಪರಿಸ್ಥಿತಿ ಈಗ ನಿಯಂತ್ರಣದಲಿದೆ. ಎರಡೂ ಕಡೆಗಳ ತಲಾ ಇಬ್ಬರು ಗಾಯಗೊಂಡಿದ್ದಾರೆ. ಎರಡೂ ಗುಂಪುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು,ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಇತರರನ್ನು ಗುರುತಿಸಲು ಪೋಲಿಸರು ವೀಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ನಡುವೆ ಎಐಎಂಐಎಂ ಶಾಸಕ ಕರ್ವಾನ್ ಎಂ.ಕೌಸರ್ ಮೊಹಿಯುದ್ದೀನ್ ಅವರು, ಸಾವಿರಾರು ಆರೆಸ್ಸೆಸ್ ಮತ್ತು ಹಿಂದೂ ವಾಹಿನಿ ಸದಸ್ಯರು ಮದರಸದ ಮೇಲೆ ದಾಳಿ ನಡೆಸಿದ್ದರು ಮತ್ತು ಆಡಳಿತ ಸಮಿತಿ ಸದಸ್ಯರನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಾಯಾಳುಗಳನ್ನು ದಾಖಲಿಸಲಾಗಿರುವ ಆಸ್ಪತ್ರೆಯಲ್ಲಿಯೂ ಗುಂಪು ದಾಂಧಲೆ ನಡೆಸಿದೆ ಎಂದಿದ್ದಾರೆ.
ಮೇಡಕ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿಯವರು ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಜಾಥಾ ನಡೆಸಿ,ಹಲವಾರು ಅಂಗಡಿ-ಮಳಿಗೆಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಮೊಹಿಯುದ್ದೀನ್ ತಿಳಿಸಿದ್ದಾರೆ.