ʼʼಮೋದಿ ಸರಕಾರದ ವೈಫಲ್ಯʼʼ: ಪುಲ್ವಾಮ ದಾಳಿ ಬಗ್ಗೆ ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯ ತನಿಖೆಗೆ ಸತ್ಯಪಾಲ್‌ ಆಗ್ರಹ

Update: 2023-09-21 10:42 GMT

Photo- PTI

ಹೊಸದಿಲ್ಲಿ: 40 ಮಂದಿ ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ 2019ರ ಪುಲ್ವಾಮಾ ಉಗ್ರರ ದಾಳಿಯ ಕುರಿತು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆಗ್ರಹಿಸಿದ್ದಾರೆ. ಆ ವರ್ಷದ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ರಾಜಕೀಕರಣಗೊಳಿಸಿದರು ಎಂದೂ ಅವರು ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಹೊಸದಿಲ್ಲಿಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸತ್ಯಪಾಲ್ ಮಲಿಕ್ ಅವರು ಈ ಹತ್ಯೆಗಳ ಕುರಿತು ಸರ್ಕಾರದ ಮೌನದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು The Telegraph ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಕೊನೆಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಾಗಿದ್ದು, ಅವರು ಆ ಹುದ್ದೆಯಲ್ಲಿದ್ದಾಗಲೇ ಪುಲ್ವಾಮಾ ಉಗ್ರರ ದಾಳಿಯು ನಡೆದಿತ್ತು.

“40 ಮಂದಿ ಯೋಧರ ಹತ್ಯೆಗೆ ಕಾರಣವಾದ ಪುಲ್ವಾಮಾ ಉಗ್ರರ ದಾಳಿಯ ಕುರಿತು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ. ಇಲ್ಲಿಯವರೆಗೆ ಈ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಕಡು ಮೌನ ಪ್ರದರ್ಶಿಸಿದೆ ಹಾಗೂ ಈ ದುರಂತದಲ್ಲಿನ ಹತ್ಯೆಗಳಿಗೆ ತನ್ನ ಭದ್ರತಾ ವೈಫಲ್ಯವೇ ಕಾರಣ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ” ಎಂದು ಅವರು ಟೀಕಿಸಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಯ ಕುರಿತು ಸರ್ಕಾರ ಹೊಣೆಗಾರಿಕೆ ಹೊರಬೇಕು ಎಂದು ಸತ್ಯಪಾಲ್ ಮಲಿಕ್ ಇದೇ ಪ್ರಥಮ ಬಾರಿಗೆ ಆಗ್ರಹಿಸುತ್ತಿರುವುದಲ್ಲ. The Wire ಸುದ್ದಿ ಸಂಸ್ಥೆಯ ಕರಣ್ ಥಾಪರ್ ಗೆ ಸ್ಫೋಟಕ ಸಂದರ್ಶನ ನೀಡಿದ್ದ ಅವರು, ಸಿಆರ್‍ಪಿಎಫ್ ತನ್ನ ಯೋಧರನ್ನು ಸಾಗಿಸಲು ಹೆಲಿಕಾಪ್ಟರ್ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಯಾಕೆಂದರೆ, ಅಷ್ಟು ದೊಡ್ಡ ಬೆಂಗಾವಲು ಪಡೆ ರಸ್ತೆಯಲ್ಲಿ ತೆರಳಲು ಸಾಧ್ಯವಿರಲಿಲ್ಲ. ಆದರೆ, ಸಿಆರ್‍ಪಿಎಫ್ ಮನವಿಯನ್ನು ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿತ್ತು ಎಂದು ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News