ಮೂರು ದಶಕಗಳ ಬಳಿಕ ಶ್ರೀನಗರದಲ್ಲಿ ಮುಹರ್ರಂ ಮೆರವಣಿಗೆ

Update: 2023-07-28 05:53 GMT

Photo: PTI

ಶ್ರೀನಗರ: ಮೂರು ದಶಕಗಳ ಬಳಿಕ ಗುರುವಾರ ಶಿಯಾ ಸಮುದಾಯದ ಮುಸ್ಲಿಮರು ಶ್ರೀನಗರದಲ್ಲಿ ಸಾಂಪ್ರದಾಯಿಕ ಮಾರ್ಗದಲ್ಲಿ ಮುಹರ್ರಂ ಮೆರವಣಿಗೆ ನಡೆಸಿದರು. ಗುರು ಬಜಾರ್ ನಿಂದ ಲಾಲ್ ಚೌಕ ಮೂಲಕ ದಾಲ್‍ ಗೇಟ್ ಗೆ ಮೆರವಣಿಗೆ ಸಾಗಿತು.

8ನೇ ಮುಹರ್ರಂ ಮೆರವಣಿಗೆ ಶಾಂತಿಯುತವಾಗಿ ಪೂರ್ಣಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಉನ್ನತ ರಕ್ಷಣಾಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎನ್ನುವುದಕ್ಕೆ ಇದು ನಿದರ್ಶನ. ಕಾಶ್ಮೀರದ ಬೀದಿಗಳಲ್ಲಿ ಹಿಂಸಾಚಾರ ಕೊನೆಗೊಂಡಿದೆ ಹಾಗೂ ಜನ ಮುಕ್ತವಾಗಿ ಉಸಿರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಿಯಾ ಸಮುದಾಯದ ಜನ ಮುಂಜಾನೆ ಗುರುಬಜಾರ್ ನಲ್ಲಿ ಸಮಾವೇಶಗೊಂಡು ಬುದ್‍ಶಾ ಚೌಕ್ ಮತ್ತು ಎಂ.ಎ.ರಸ್ತೆ ಮೂಲಕ ದಾಲ್‍ ಗೇಟ್ ತಲುಪಿದ ಬಳಿಕ ಮೆರವಣಿಗೆ ಮುಕ್ತಾಯಗೊಂಡಿತು. ಭಾವನಾತ್ಮಕ ಘೋಷಣೆಗಳು ಮೆರವಣಿಗೆಯಲ್ಲಿ ಕೇಳಿಬಂದವು. 25 ಸಾವಿರ ಮಂದಿಯ ಮೆರವಣಿಗೆ ಸಂಪೂರ್ಣ ಶಿಸ್ತುಬದ್ಧವಾಗಿತ್ತು ಹಾಗೂ ಸಮನ್ವಯದಿಂದ ಕೂಡಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಮೆರವಣಿಗೆಗಾಗಿ ಹಲವು ಹಂತಗಳ ಭದ್ರತಾ ಸುರಕ್ಷೆಯನ್ನು ಒದಗಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಖಾತರಿಪಡಿಸುವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳಿಗ್ಗೆ 6 ಗಂಟೆಗೆ ಆರಂಭವಾದ ಮುಹರ್ರಂ ಮೆರವಣಿಗೆ 11 ಗಂಟೆಗೆ ಮುಕ್ತಾಯವಾಯಿತು. ಭದ್ರತಾ ಪಡೆಗಳು ಮುಂಜಾನೆ 4ರಿಂದಲೇ ಮೈದಾನಕ್ಕೆ ಆಗಮಿಸಿದ್ದರು. ಮೆರವಣಿಗೆ ಆರಂಭಕ್ಕೆ ಮುನ್ನ 5 ಗಂಟೆಯ ವೇಳೆಗೆ ನಾಕಾಗಳನ್ನು ಸ್ಥಾಪಿಸಲಾಯಿತು. ಬೆಳಿಗ್ಗೆಯಿಂದಲೇ ಸಂಚಾರ ನಿರ್ವಹಣೆ ಅದ್ಭುತವಾಗಿತ್ತು" ಎಂದು ಹೆಚ್ಚುವರಿ ಡಿಜಿ (ಕಾಶ್ಮೀರ) ವಿಜಯ ಕುಮಾರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News