ನನ್ನ ಹೋರಾಟ ಸರ್ವಾಧಿಕಾರದ ವಿರುದ್ಧ, 140 ಕೋಟಿ ಜನರೂ ಈ ಹೋರಾಟದಲ್ಲಿ ಭಾಗಿಯಾಗಬೇಕಿದೆ : ದಿಲ್ಲಿ ಸಿಎಂ ಕೇಜ್ರಿವಾಲ್
ಹೊಸದಿಲ್ಲಿ : “ನಾನು ಸರ್ವಾಧಿಕಾರದ ವಿರುದ್ಧ ತನು – ಮನ - ಧನದಿಂದ ಹೋರಾಡುತ್ತಿದ್ದೇನೆ. 140 ಕೋಟಿ ಜನರೂ ಸರ್ವಧಿಕಾರದ ವಿರುದ್ಧ ಹೋರಾಡಬೇಕಿದೆ. ನಾವೆಲ್ಲರೂ ಸೇರಿಕೊಂಡು ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ” ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
50 ದಿನಗಳ ಬಳಿಕ ಜೈಲಿನಿಂದ ಮಧ್ಯಂತರ ಜಾಮೀನು ಆದೇಶದಲ್ಲಿ ಬಿಡುಗಡೆಯಾದ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿಯಲ್ಲಿ ತೆರೆದ ವಾಹನದಲ್ಲಿ ಆಮ್ ಆದ್ಮಿ ಪಕ್ಷದ ಬೆಂಬಲಿಗರ ಮಧ್ಯೆ ನಿಂತು ಮಾತನಾಡಿದರು. “ನಮ್ಮದು ಮಹಾನ್ ದೇಶ. ದೇಶಕ್ಕೆ 4000 ವರ್ಷಗಳ ಇತಿಹಾಸವಿದೆ. ಈ ದೇಶದಲ್ಲಿ ಜನರು ಯಾವತ್ತೂ ಸರ್ವಾಧಿಕಾರವನ್ನು ಸಹಿಸಿಕೊಂಡಿಲ್ಲ” ಎಂದು ಅವರು ಹೇಳಿದ್ದಾರೆ.
“ನಾನು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಅವರ ತೀರ್ಪಿನಿಂದ ನಾನು ನಿಮ್ಮ ಮಧ್ಯೆ ನಿಲ್ಲಲು ಸಾಧ್ಯವಾಗಿದೆ. ದೇಶದಾದ್ಯಂತ ಕೋಟಿ ಕೋಟಿ ಜನರು ನನ್ನನ್ನು ಆಶಿರ್ವಾದಿಸಿದರು. ತಮ್ಮ ಪ್ರಾರ್ಥನೆಗಳನ್ನು ನನಗೆ ಕಳುಹಿಸಿದರು. ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಕೇಜ್ರಿವಾಲ್ ಹೇಳಿದರು.
“ನಿಮ್ಮ ಮುಂದೆ ಬಂದು ಬಹಳ ಸಂತೋಷವಾಗುತ್ತಿದೆ. ನಾನು ಬೇಗ ಬರುತ್ತೇನೆ ಎಂದು ಮೊದಲೇ ಹೇಳಿದ್ದೆ. ಹನುಮಾನ್ ದೇವರ ಕೃಪೆಯಿಂದ ಇದು ಸಾಧ್ಯವಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕನೌಟ್ ಪ್ಲೇಸ್ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿಲಿದ್ದೇನೆ. ಹನುಮಾನ್ ದೇವರ ಆಶಿರ್ವಾದ ಪಡೆದು ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಬಳಿಕ ಸಂಜೆ ದಕ್ಷಿಣ ದಿಲ್ಲಿಯಲಿ ರೋಡ್ ಶೋನಲ್ಲಿ ಭಾಗವಹಿಸುತ್ತೇನೆ” ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.