ನಾಗ್ಪುರ್‌ ವಿವಿ ಪಠ್ಯಕ್ಕೆ ಬಿಜೆಪಿ, ‘ರಾಮ ಜನ್ಮಭೂಮಿ ಆಂದೋಲನ’ ಸೇರ್ಪಡೆ; ಸಿಪಿಐ, ಡಿಎಂಕೆ ಕುರಿತ ವಿಷಯ ಕಡಿತ

Update: 2023-09-01 10:44 GMT

Photo: nagpuruniversity.org

ಹೊಸದಿಲ್ಲಿ: ತನ್ನ ಎಂಎ ಇತಿಹಾಸ ಪಠ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ ಎಂಬ ವಿಷಯವನ್ನು ಸೇರಿಸುವ ಮತ್ತು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ಕುರಿತ ಕೆಲವು ಭಾಗಗಳನ್ನು ತೆಗೆದು ಹಾಕಿದ ನಾಗ್ಪುರ್‌ ವಿಶ್ವವಿದ್ಯಾಲಯದ ಕ್ರಮ ವಿವಾದಕ್ಕೀಡಾಗಿದೆ.

ಹಿಂದಿನ ಪಠ್ಯಕ್ರಮದಲ್ಲಿದ್ದ ಜನಸಂಘ ಮತ್ತು ರಿಪಬ್ಲಿಕನ್‌ ಪಾರ್ಟಿ ಕುರಿತು ಭಾಗಗಳನ್ನು ಉಳಿಸಲಾಗಿದೆ ಆದರೆ ಕಾಂಗ್ರೆಸ್‌ ಮಿತ್ರಪಕ್ಷವಾಗಿರುವ ದ್ರಾವಿಡ ಮುನ್ನೇತ್ರ ಕಝಗಂ (ಡಿಎಂಕೆ)ಯ ಕುರಿತ ವಿಷಯ ಕೈಬಿಟ್ಟು ಬಿಜೆಪಿ ಮಿತ್ರ ಪಕ್ಷವಾಗಿರುವ ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಝಗಂ (ಎಐಎಡಿಎಂಕೆ) ವಿಷಯ ಸೇರಿಸಲಾಗಿದೆ. ಜೊತೆಗೆ ಖಾಲಿಸ್ತಾನ ಆಂದೋಲನದ ಅಧ್ಯಾಯವನ್ನು ವಿವಿ ಕೈಬಿಟ್ಟಿದೆ.

ರಾಮ ಜನ್ಮ ಭೂಮಿ ಆಂದೋಲನದತ್ತ ಬೆಳಕು ಚೆಲ್ಲುವ “ಇಂಡಿಯನ್‌ ಮಾಸ್‌ ಮೂವ್ಮೆಂಟ್ಸ್‌ ಫ್ರಮ್‌ 1980-2000” ಎಂಬ ಹೊಸ ಅಧ್ಯಾಐವನ್ನು ಸೇರಿಸಲಾಗಿದೆ. ವಿಶ್ವವಿದ್ಯಾಲಯವು 2019ರಲ್ಲಿ ಆರೆಸ್ಸೆಸ್‌ ಕುರಿತ ಅಧ್ಯಾಯವನ್ನು ತನ್ನ ಬಿಎ ಇತಿಹಾಸ ಪಠ್ಯಕ್ರಮದಲ್ಲಿ ಸೇರಿಸಿ ಇಂತಹುದೇ ವಿವಾದ ಸೃಷ್ಟಿಸಿತ್ತು.

ಈಗಿನ ಹೊಸ ಪಠ್ಯಕ್ರಮವನ್ನು ನಾಗ್ಪುರ್‌ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿ (ಇತಿಹಾಸ) ಅಧ್ಯಕ್ಷ ಶ್ಯಾಮ್‌ ಕೊರೆಟ್ಟಿ ಅವರು ಸಿದ್ಧಪಡಿಸಿದ್ದಾರೆ. “ನಾವು ಸಿಪಿಐ(ಎಂ) ಅನ್ನು ತೆಗೆದುಹಾಕಿದ್ದೇವೆ ಏಕೆಂದರೆ ಅದು ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಮತ್ತು ಬಿಜೆಪಿಯನ್ನು ಸೇರಿಸಿದ್ದೇವೆ. ರಾಷ್ಟ್ರೀಯ ಪಕ್ಷವಾಗಿರುವ ಹೊರತಾಗಿಯೂ ಅದನ್ನು ಹಳೆ ಪಠ್ಯಕ್ರಮದಲ್ಲಿ ಸೇರಿಸಲಾಗಿರಲಿಲ್ಲ. ನಾವು 2010ರ ತನಕದ ಬಿಜೆಪಿ ಇತಿಹಾಸವನ್ನು ಮಾತ್ರ ಸೇರಿಸಿದ್ದೇವೆ. ಮಕ್ಕಳಿಗೆ ತಪ್ಪಾದ ವಿಷಯಗಳನ್ನು ಕಲಿಸಲು ಸಾಧ್ಯವಿಲ್ಲ,” ಎಂದು ಕೊರೆಟ್ಟಿ ಹೇಳಿದ್ದಾರೆ.

ನಾಗ್ಪುರ್‌ ವಿವಿಯ ವಿವಿಧ ವಿಭಾಗಗಳು ಹೊಸ ಶಿಕ್ಷಣ ನೀತಿಯ ಅನುಸಾರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ ಅವರು ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು ಮತ್ತು ಇಂದಿರಾ ಗಾಂಧಿ ಅವರ ವಿಷಯಗಳನ್ನೂ ಹೊಸ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News