‘ನೋಟ’ ಗುಂಡಿ ಒತ್ತುವಂತೆ ಮನವಿ: ಪ್ರಜಾಸತ್ತೆ ದುರ್ಬಲಗೊಳಿಸುತ್ತಿರುವ ಕಾಂಗ್ರೆಸ್; ಬಿಜೆಪಿ ಆರೋಪ
ಹೊಸದಿಲ್ಲಿ: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಮತದಾನದ ವೇಳೆ ‘ನೋಟ’ (ಯಾವುದೇ ಅಭ್ಯರ್ಥಿಗೆ ಬೆಂಬಲವಿಲ್ಲ) ಗುಂಡಿಯನ್ನು ಒತ್ತುವಂತೆ ಮತದಾರರಿಗೆ ಕಾಂಗ್ರೆಸ್ ಮಾಡಿರುವ ಮನವಿಯು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
‘‘ಯಾವುದೇ ಅಭ್ಯರ್ಥಿಗೆ ಬೆಂಬಲವಿಲ್ಲ’’ (NOTA) ಎನ್ನುವ ಬಟನ್ ಒತ್ತುವಂತೆ ಜನರಿಗೆ ಮನವಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ಅಪರಾಧವಾಗಿದೆ ಎಂದು ಮಧ್ಯಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ವಿ.ಡಿ.ಶರ್ಮ ಹೇಳಿಕೊಂಡರು. ‘‘ಕಾಂಗ್ರೆಸ್ ನಾಯಕತ್ವವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಬಯಸಿದೆ’’ ಎಂದು ಅವರು ಆರೋಪಿಸಿದರು.
ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಕ್ಷಯ್ ಕಾಂತಿ ಬಮ್ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡು ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ಸ್ಮರಿಸಬಹುದಾಗಿದೆ. ಇಂದೋರ್ ನಲ್ಲಿ ಮೇ 13ರಂದು ಮತದಾನ ನಡೆಯಲಿದೆ.
ಭೂ ವ್ಯವಹಾರಕ್ಕೆ ಸಂಬಂಧಿಸಿದ 17 ವರ್ಷ ಹಿಂದಿನ ಪ್ರಕರಣವೊಂದರಲ್ಲಿ ಅಕ್ಷಯ್ ಕಾಂತಿ ಬಮ್ ವಿರುದ್ಧ ಕೊಲೆಯತ್ನ ಆರೋಪವನ್ನು ಸೇರಿಸುವಂತೆ ಇಂದೋರ್ ನ ಸೆಶನ್ಸ್ ನ್ಯಾಯಾಲಯವೊಂದು ಪೊಲೀಸರಿಗೆ ನಿರ್ದೇಶನ ನೀಡಿದ ಐದು ದಿನಗಳ ಬಳಿಕ ಬಾಮ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಎಪ್ರಿಲ್ 30ರಂದು, ಬಿಜೆಪಿಗೆ ಪಾಠ ಕಲಿಸಲು ‘ನೋಟ’ ಬಟನ್ ಒತ್ತುವಂತೆ ಇಂದೋರ್ ನ ಮತದಾರರಿಗೆ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಜಿತು ಪತ್ವಾರಿ ಮನವಿ ಮಾಡಿದ್ದರು.
ಬಿಜೆಪಿಯು ಕೊಲೆಯತ್ನ ಪ್ರಕರಣದಲ್ಲಿ ಪ್ರಭಾವ ಬೀರಿ ಮತ್ತು ಇತರ ಪ್ರಕರಣಗಳನ್ನು ದಾಖಲಿಸುವ ಬೆದರಿಕೆಯೊಡ್ಡಿ, ಕಾಂಗ್ರೆಸ್ ಅಭ್ಯರ್ಥಿಯನ್ನು ತನ್ನತ್ತ ಬಲವಂತವಾಗಿ ಸೆಳೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.