ನೀತಿ ಆಯೋಗದ ಶ್ರೇಯಾಂಕ: 112 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಹಿಂಸಾಚಾರ ಪೀಡಿತ ನೂಹ್ ಜಿಲ್ಲೆಗೆ ಎರಡನೇ ಸ್ಥಾನ
ಹೊಸದಿಲ್ಲಿ: ಜುಲೈ 31ರಿಂದ ಮತೀಯ ಹಿಂಸಾಚಾರದಿಂದ ನಲುಗಿರುವ ಹರಿಯಾಣದ ನೂಹ್ ಜಿಲ್ಲೆ 112 ಮಹತ್ವಾಕಾಂಕ್ಷಿ ಜಿಲ್ಲೆಗಳ ಪೈಕಿ 30ನೇ ಸ್ಥಾನದಿಂದ 2ನೇ ಸ್ಥಾನಕ್ಕೇರಿದೆ ಎಂದು indianexpress.com ವರದಿ ಮಾಡಿದೆ.
ಗುರುವಾರ ಈ ಕುರಿತು ಮಾಹಿತಿ ನೀಡಿದ ಸರ್ಕಾರಿ ವಕ್ತಾರರೊಬ್ಬರು, “ಮಹತ್ವಾಕಾಂಕ್ಷಿ ಜಿಲ್ಲೆಗಳು ಕಾರ್ಯಕ್ರಮದಡಿ ಮುಖ್ಯಮಂತ್ರಿ ಮನೋಹರ್ ಲಾಲ್ ಅವರು ಅದ್ಭುತ ಸಾಮರ್ಥ್ಯದೊಂದಿಗೆ ಪ್ರಯತ್ನ ಮಾಡಿರುವುದರಿಂದ ಸಕಾರಾತ್ಮಕ ಫಲಿತಾಂಶ ಬಂದಿದ್ದು, ನೂಹ್ ಜಿಲ್ಲೆಯು ನೀತಿ ಆಯೋಗದ ಡೆಲ್ಟಾ ಶ್ರೇಯಾಂಕದಲ್ಲಿ 30ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇದು ಅದ್ಭುತ ಸಾಧನೆಯಾಗಿದ್ದು, ಕಳೆದ ತಿಂಗಳು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಕಾರ್ಯತಂತ್ರ ಹಾಗೂ ಮಾರ್ಗಸೂಚಿಗಳು ನೂಹ್ ಜಿಲ್ಲೆಯಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ಸೂಚಿಸುತ್ತಿದೆ” ಎಂದು ಹೇಳಿದ್ದಾರೆ. ಇದರೊಂದಿಗೆ, ಈ ಯೋಜನೆಯು ದೇಶಾದ್ಯಂತ ಭಾರಿ ಪ್ರಮಾಣದ ಸಾಮಾಜೋ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಜಿಲ್ಲೆಗಳನ್ನು ಮೇಲೆತ್ತುವ ಗುರಿ ಹೊಂದಿದೆ ಎಂದೂ ತಿಳಿಸಿದ್ದಾರೆ.
ನೂಹ್ ಜಿಲ್ಲಾಧಿಕಾರಿ ಧಿರೇಂದ್ರ ಖಡ್ಗಟ ಪ್ರಕಾರ, “ಜಿಲ್ಲೆಯ ಶ್ರೇಯಾಂಕವನ್ನು ಸುಧಾರಿಸಲು ಮಹತ್ವಾಕಾಂಕ್ಷಿ ಜಿಲ್ಲೆಗಳು ಯೋಜನೆಯ ಇತರ ಮಾನದಂಡಗಳಡಿಯೂ ನಿರಂತರ ಪ್ರಯತ್ನ ನಡೆಸಲಾಯಿತು. ಜಿಲ್ಲೆಯು ಕೃಷಿ ಮತ್ತು ಜಲ ಸಂಪನ್ಮೂಲ ಮಾನದಂಡಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದರ ಅಂಕವು 26.2ರಿಂದ 30.7ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ, ಆರೋಗ್ಯ ಮತ್ತು ಪೌಷ್ಟಿಕತೆ ಮಾನದಂಡಗಳಲ್ಲಿ ಅದರ ಅಂಕವು 64.9ರಿಂದ 71.3ಗೆ ಏರಿಕೆಯಾಗುವ ಮೂಲಕ ಎರಡನೆಯ ಸ್ಥಾನದಲ್ಲಿದೆ. ಇತರ ಇಲಾಖೆಗಳ ಶ್ರೇಯಾಂಕದಲ್ಲಿ ನಿರಂತರವಾಗಿ ಸುಧಾರಣೆಯಾಗಿರುವುದರಿಂದ, ಜಿಲ್ಲೆಯು ಒಟ್ಟಾರೆ ಮಹತ್ವಾಕಾಂಕ್ಷಿ ಜಿಲ್ಲೆಗಳ ಪೈಕಿ ಎರಡನೆಯ ಸ್ಥಾನವನ್ನು ಗಿಟ್ಟಿಸಿದೆ” ಎಂದು ಹೇಳಿದ್ದಾರೆ.
“ಈ ಕಾರ್ಯಕ್ರಮವು ಪ್ರಗತಿ ಹೊಂದುತ್ತಿರುವ ಆರ್ಥಿಕತೆಯಲ್ಲಿ ಜನರು ಸಂಪೂರ್ಣವಾಗಿ ಭಾಗವಹಿಸುವ ಮೂಲಕ ತಮ್ಮ ಶಕ್ತ್ಯಾನುಸಾರ ಅದರ ಗರಿಷ್ಠ ಪ್ರಯೋಜನ ಪಡೆಯುವ ಅವರ ಸಾಮರ್ಥ್ಯವನ್ನು ವೃದ್ಧಿಸುವ ಗುರಿ ಹೊಂದಿದೆ. ಆರೋಗ್ಯ ಮತ್ತು ಪೌಷ್ಟಿಕತೆ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲಗಳು, ಆರ್ಥಿಕ ಸಮಗ್ರತೆ ಮತ್ತು ಕೌಶಲಾಭಿವೃದ್ಧಿ ಹಾಗೂ ಮೂಲಭೂತ ಮೂಲಸೌಕರ್ಯ ಈ ಯೋಜನೆಯಲ್ಲಿನ ಪ್ರಮುಖ ವಲಯಗಳಾಗಿವೆ” ಎಂದೂ ಅವರು ತಿಳಿಸಿದ್ದಾರೆ.