ಬ್ಯಾನರ್ ಹಾಕಲ್ಲ, ಲಂಚ ಪಡೆಯಲ್ಲ, ಚಹಾನೂ ಕುಡಿಸಲ್ಲ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ನಿತಿನ್ ಗಡ್ಕರಿ ಕಾರ್ಯತಂತ್ರ

Update: 2023-09-30 12:57 GMT

PHOTO : Indiatoday

ನಾಗಪುರ: ತಾವು ಪ್ರತಿನಿಧಿಸುತ್ತಿರುವ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನನ್ನ ಯಾವುದೇ ಬ್ಯಾನರ್ ಅಥವಾ ಪೋಸ್ಟರ್ ಗಳನ್ನು ಅಂಟಿಸಬಾರದು ಹಾಗೂ ಜನರಿಗೆ ಟೀಯನ್ನು ಕುಡಿಸಬಾರದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ನನಗೆ ಯಾರು ಮತ ನೀಡಲು ಬಯಸುತ್ತಾರೊ ಅವರು ನೀಡುತ್ತಾರೆ, ಯಾರು ನೀಡಲು ಬಯಸುವುದಿಲ್ಲವೊ ಅವರು ನೀಡುವುದಿಲ್ಲ ಎಂದೂ ಅವರು ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.

ಮಹಾರಾಷ್ಟ್ರದ ವಾಶಿಮ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ, ನಾನು ಲಂಚ ಪಡೆಯುವುದಿಲ್ಲ ಮತ್ತು ಬೇರೆ ಯಾರೂ ಲಂಚ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

“ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಬ್ಯಾನರ್ ಅಥವಾ ಪೋಸ್ಟರ್ ಗಳನ್ನು ಅಂಟಿಸಬಾರದು ಎಂದು ನಾನು ನಿರ್ಧರಿಸಿದ್ದೇನೆ. ಜನರಿಗೆ ಟೀಯನ್ನು ಪೂರೈಸಲಾಗುವುದಿಲ್ಲ. ಯಾರು ನನಗೆ ಮತ ನೀಡಲು ಬಯಸುತ್ತಾರೊ ಅವರು ಮತ ನೀಡುತ್ತಾರೆ, ಯಾರು ಮತ ನೀಡಲು ಬಯಸುವುದಿಲ್ಲವೊ ಅವರು ಮತ ನೀಡುವುದಿಲ್ಲ. ನಾನು ಲಂಚ ಪಡೆಯುವುದಿಲ್ಲ ಅಥವಾ ಮತ್ತೊಬ್ಬರು ಲಂಚ ಪಡೆಯಲು ಅವಕಾಶ ನೀಡುವುದಿಲ್ಲ. ಆದರೆ, ನಾನು ನಿಮಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬಲ್ಲೆ ಎಂದು ನಂಬಿಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಜುಲೈ ತಿಂಗಳಲ್ಲಿ ನಾನು ಒಮ್ಮೆ ಮತದಾರರಿಗೆ ಮಾಂಸದೂಟ ಪೂರೈಸಿಯೂ ಪರಾಭವಗೊಂಡಿದ್ದೆ ಎಂದು ನೆನಪಿಸಿಕೊಂಡಿದ್ದ ನಿತಿನ್ ಗಡ್ಕರಿ, ಮತದಾರರಲ್ಲಿ ವಿಶ್ವಾಸ ಮತ್ತು ಪ್ರೀತಿಯನ್ನು ಪೋಷಿಸುವ ಮೂಲಕ ಚುನಾವಣೆಗಳನ್ನು ಗೆಲ್ಲಬಹುದಾಗಿದೆ ಎಂದು ಒತ್ತಿ ಹೇಳಿದ್ದರು. ಮಹಾರಾಷ್ಟ್ರ ರಾಜ್ಯ ಶಿಕ್ಷಕರ ಮಂಡಳಿಯು ನಾಗಪುರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಿತಿನ್ ಗಡ್ಕರಿ ಈ ಹೇಳಿಕೆಯನ್ನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News