ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ಹಣ ಬಾಕಿಯಿಲ್ಲ: ನಿರ್ಮಲಾ ಸೀತಾರಾಮನ್

Update: 2023-12-01 16:03 GMT

ನಿರ್ಮಲಾ ಸೀತಾರಾಮನ್ | Photo: PTI 

ಬೆಂಗಳೂರು: ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ಹಣ ಬಾಕಿಯಿಲ್ಲ ಮತ್ತು ಬರ ಪರಿಹಾರವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF)ಯಿಂದ ರಾಜ್ಯಕ್ಕೆ ಸಿಗಬೇಕಿರುವ ಹಣವು ಉನ್ನತಾಧಿಕಾರ ಸಮಿತಿಯು ನಿರ್ಧರಿಸಿದ ತಕ್ಷಣವೇ ಸಿಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷಗಳಿಗೂ ಅಧಿಕ ಸಮಯ ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರಿಂದ ರಾಜ್ಯಗಳಿಗೆ ಸಕಾಲದಲ್ಲಿ ಹಣ ದೊರೆಯುವುದರ ಮಹತ್ವ ಅವರಿಗೆ ಗೊತ್ತಿದೆ ಎಂದರು.

ಕೇಂದ್ರವು ಕರ್ನಾಟಕಕ್ಕೆ ಹಣ ಬಿಡುಗಡೆಯನ್ನು ವಿಳಂಬಿಸುತ್ತಿದೆ ಎಂಬ ಕಾಂಗ್ರೆಸ್ ಸರಕಾರದ ಆರೋಪದ ಕುರಿತು ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್,‘ರಾಜ್ಯ ಸರಕಾರವು ಆರೋಪಗಳನ್ನು ಮಾಡಬಹುದು. ಸಚಿವರು ಅಥವಾ ಮುಖ್ಯಮಂತ್ರಿಗಳು ನನಗೆ ಪತ್ರವನ್ನು ರವಾನಿಸುತ್ತಾರೆ,ಆದರೆ ಅದು ನನಗೆ ಮುಟ್ಟುವ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಾರೆ. ಕೇವಲ ಬೆಂಗಳೂರಿನಲ್ಲಿ ನಾನು ಈ ಮಾತನ್ನು ಹೇಳುತ್ತಿಲ್ಲ,ಎರಡು ದಿನಗಳ ಹಿಂದೇ ಕೇರಳದಲ್ಲಿಯೂ ಇದನ್ನೇ ಹೇಳಿದ್ದೇನೆ ’ ಎಂದು ತಿಳಿಸಿದರು.

‘ನಮ್ಮಿಂದ ಕರ್ನಾಟಕಕ್ಕೆ ಯಾವುದೇ ಬಾಕಿಯಿಲ್ಲ. ನಾನು ರಾಜ್ಯದ ಸಂಸದೆಯಾಗಿದ್ದೇನೆ ಮತ್ತು ನನಗೂ ಜವಾಬ್ದಾರಿಯಿದೆ. ರಾಜ್ಯವು ನನಗೆ ಅಗತ್ಯ ದಾಖಲೆಗಳನ್ನು ಕಳುಹಿಸದಿದ್ದರೆ ನಾನು ಅದಕ್ಕಾಗಿ ಕಾಯಬೇಕಾಗುತ್ತದೆ. ಅಕೌಂಟಟ್ ಜನರಲ್ ಒಪ್ಪಿಗೆಯಿಲ್ಲದೆ ನಾನು ಹಣವನ್ನು ಕಳುಹಿಸುವಂತಿಲ್ಲ. ಇದು ಯಾವುದೇ ಆರೋಪದ ಹಿಂದಿನ ಸತ್ಯವಾಗಿದೆ ಮತ್ತು ರಾಜ್ಯ ಸರಕಾರದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ’ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು 23 ಇಲಾಖೆಗಳಿಗೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ಹಣವನ್ನು ಬಿಡುಗಡೆ ಮಾಡಿಲ್ಲ,ಜೊತೆಗೆ ರಾಜ್ಯದ ತೆರಿಗೆ ಪಾಲನ್ನೂ ಕಡಿತಗೊಳಿಸಿದೆ. ಇದು ರಾಜ್ಯಕ್ಕೆ ಹೊರೆಯನ್ನುಂಟು ಮಾಡಿದೆ. ತೆರಿಗೆ ಪಾಲಿನ ಕಡಿತದಿಂದ 2020ರಿಂದ ರಾಜ್ಯಕ್ಕೆ 45,000 ಕೋಟಿ ರೂ.ಗಳಷ್ಟು ನಷ್ಟವುಂಟಾಗಿದೆ. ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನದ ಭರವಸೆಯನ್ನು ನೀಡಲಾಗಿತ್ತಾದರೂ ರಾಜ್ಯದ ಸಂಸದೆಯಾಗಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ಅನುಮೋದಿಸಿಲ್ಲ. ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆಯ ಪ್ರತಿ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆಯನ್ನು ಅದಕ್ಕೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ನಲ್ಲಿ ಆರೋಪಿಸಿದ್ದರು.

ಕರ್ನಾಟಕಕ್ಕೆ ಬರ ಪರಿಹಾರಕ್ಕಾಗಿ ಎನ್ ಡಿ ಆರ್ ಎಫ್ ನಿಂದ ಹಣ ಬಿಡುಗಡೆ ಕುರಿತು ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್,‘ಎನ್ಡಿಆರ್ಎಫ್ಗಾಗಿ ಸಮಿತಿಯೊಂದಿದ್ದು,ಗೃಹಸಚಿವರು ಅದನ್ನು ನೋಡಿಕೊಳ್ಳುತ್ತಾರೆ. ಕರ್ನಾಟಕದ ಸಚಿವ ಕೃಷ್ಣ ಬೈರೇಗೌಡ ಅವರು ನನ್ನನ್ನು ಭೇಟಿಯಾಗಿದ್ದರು ಮತ್ತು ಹಣದ ಬಗ್ಗೆ ನಿರ್ಧರಿಸಲಾಗುತ್ತದೆ, ಸದ್ಯಕ್ಕೆ ವೆಚ್ಚಕ್ಕಾಗಿ ಎಸ್ ಡಿ ಆರ್ ಎಫ್ ಹಣವು ರಾಜ್ಯ ಸರಕಾರದ ಬಳಿಯಿದೆ ಎಂದು ನಾನು ಅವರಿಗೆ ತಿಳಿಸಿದ್ದೆ ’ ಎಂದು ಹೇಳಿದರು.

ಎನ್ ಡಿ ಆರ್ ಎಫ್ ಹಣ ಬರುವುದಿಲ್ಲ ಎಂದಲ್ಲ. ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿ ಉನ್ನತಾಧಿಕಾರ ಸಮಿತಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಸಮಿತಿಯು ಶಿಫಾರಸು ಮಾಡಿದ ತಕ್ಷಣ ರಾಜ್ಯಕ್ಕೆ ಹಣ ಲಭಿಸಲಿದೆ. ಅದು ರಾಜ್ಯಕ್ಕೆ ಸಿಗಬೇಕಿರುವ ಹಣವಾಗಿದೆ,ಅದನ್ನು ಯಾರೂ ತಡೆಯುವುದಿಲ್ಲ ’ ಎಂದು ತಿಳಿಸಿದರು.

ರಾಜ್ಯ ಸರಕಾರವು ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಎನ್ ಡಿ ಆರ್ ಎಫ್ ನಿಯಮಗಳಂತೆ ಬರ ಪರಿಹಾರ ನಿಧಿಯ ಬಿಡುಗಡೆಯಲ್ಲಿ ವಿಳಂಬಕ್ಕಾಗಿ ಅದು ಕೇಂದ್ರವನ್ನು ಪದೇ ಪದೇ ದೂಷಿಸಿದೆ.

ಉತ್ತರ ಕರ್ನಾಟಕದ ರೈತರಿಗೆ ತಕ್ಷಣವೇ ಸ್ವಲ್ಪ ಹಣ ಕೈಸೇರುವಂತಾಗಲು ಅವರ ಬಳಿಯಿರುವ ಕೃಷ್ಯುತ್ಪನ್ನಗಳ ದಾಸ್ತಾನು ಖರೀದಿಸುವಂತೆ ತಾನು ಐಟಿಸಿ ಗ್ರೂಪನ್ನು ಕೇಳಿಕೊಂಡಿದ್ದೇನೆ. ಅದರ ತಂಡವೂ ರಾಜ್ಯಕ್ಕೆ ಬಂದಿದೆ ಎಂದು ಸೀತಾರಾಮನ್ ಹೇಳಿದರು.

ಗುರುವಾರ ಅವರು ಇಲ್ಲಿಯ ಸುಭೇದಾರ್ ಛತ್ರಂ ರಸ್ತೆಯಲ್ಲಿರುವ ಜನೌಷಧಿ ಕೇಂದ್ರಕ್ಕೂ ಭೇಟಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News