ತಮ್ಮನ್ನು ತಡೆದಿದ್ದಕ್ಕೆ ಐಪಿಎಸ್ ಅಧಿಕಾರಿಯನ್ನು ಖಾಲಿಸ್ತಾನಿ ಎಂದ ಬಿಜೆಪಿ ನಾಯಕರು!
ಕೊಲ್ಕತ್ತಾ : ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಸಂದೇಶಖಲಿ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದ ವಿಪಕ್ಷ ಬಿಜೆಪಿ ನಾಯಕರನ್ನು ತಡೆದಾಗ ಗುಂಪಿನಲ್ಲಿ ಒರ್ವರು ಅಧಿಕಾರಿಯನ್ನು ಖಾಲಿಸ್ತಾನಿ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮನ್ನು ಖಾಲಿಸ್ತಾನಿ ಎಂದು ಕರೆದಿರುವುದನ್ನು ಕೇಳಿ ಐಪಿಎಸ್ ಅಧಿಕಾರಿ ಜಸ್‌ಪ್ರೀತ್ ಸಿಂಗ್ "ಪೇಟ ಧರಿಸಿದ್ದೇನೆಂಬ ಮಾತ್ರಕ್ಕೆ ಖಾಲಿಸ್ತಾನಿ ಎನ್ನುತ್ತೀರಾ?" ಎಂದು ಪ್ರಶ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ನಾನು ಪೇಟ ಧರಿಸಿದ್ದೇನೆಂಬ ಮಾತ್ರಕ್ಕೆ ನನ್ನನ್ನು ಖಾಲಿಸ್ತಾನಿ ಎಂದು ಕರೆಯುತ್ತೀರಾ? ನಿಮಗೆ ಇಷ್ಟೊಂದು ಧೈರ್ಯವೇ? ಪೇಟ ಧರಿಸಿ ಯಾವುದೇ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ ಅವರು ಖಾಲಿಸ್ತಾನಿ ಆಗುತ್ತಾರೆಯೇ?” ಎಂದು ಅವರು ಸುವೇಂದು ಅಧಿಕಾರಿ ಸಹಿತ ಬಿಜೆಪಿ ಶಾಸಕರಿದ್ದ ತಂಡಕ್ಕೆ ಹೇಳುವುದು ಕೇಳಿಸಿದೆ.
“ನಾನು ನಿಮ್ಮ ಧರ್ಮದ ಬಗ್ಗೆ ಏನೂ ಹೇಳುವುದಿಲ್ಲ. ನೀವೂ ನನ್ನ ಧರ್ಮದ ಬಗ್ಗೆ ಏನೂ ಹೇಳಬಾರದು. ಏಕೆ ಹೀಗೆ ಮಾಡುತ್ತೀರಿ?” ಎಂದು ಅವರು ಪ್ರಶ್ನಿಸಿದರು.
ಆಗ ಅಧಿಕಾರಿ ಜೊತೆಗಿದ್ದ ಬಿಜೆಪಿ ಶಾಸಕ ಅಗ್ನಿಮಿತ್ರ ಪೌಲ್ ಅವರು ಸಿಂಗ್ ಅವರನ್ನು ಉದ್ದೇಶಿಸಿ, “ನಿಮ್ಮ ಕರ್ತವ್ಯ ನಿರ್ವಹಿಸಿ, ಯಾರೋ ಒಬ್ಬರ ಪರ ಏಕೆ ವಹಿಸುತ್ತಿದ್ದೀರಿ?” ಎಂದು ಹೇಳುವುದು ಕೇಳಿಸಿದೆ.