ಅಗ್ನಿವೀರ್ ಯೋಧರ ಸೇವಾವಧಿಯನ್ನು ವಿಸ್ತರಿಸಿ, ದೀರ್ಘಕಾಲದ ತರಬೇತಿ ನೀಡುವ ಪ್ರಸ್ತಾಪ ಮಂಡಿಸಿದ ಸೇನಾಪಡೆಗಳು

Update: 2024-06-13 06:24 GMT

Photo: indianexpress

ಹೊಸದಿಲ್ಲಿ: ಅಗ್ನಿವೀರ್ ಯೋಧರನ್ನು ಸೇನಾಪಡೆಯಲ್ಲೇ ಉಳಿಸಿಕೊಳ್ಳಲು ಇರುವ ಈಗಿನ ಶೇ. 25ರ ಮಿತಿಯೊಂದಿಗೆ ಅವರ ತರಬೇತಿ ಅವಧಿಯ ವಿಸ್ತರಣೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಅಗ್ನಿವೀರ್ ನೇಮಕಾತಿ ಯೋಜನೆಗೆ ತರುವ ಸಾಧ್ಯತೆಯ ಕುರಿತು ಸೇನಾಪಡೆಗಳು ಚರ್ಚಿಸುತ್ತಿವೆ ಎಂದು ವರದಿಯಾಗಿದೆ.

ಈ ಯೋಜನೆಯ ಕುರಿತು ಕೆಲವು ಕಳವಳಗಳು ವ್ಯಕ್ತವಾಗಿರುವುದು ಮೂರೂ ಸೇನಾಪಡೆಗಳು ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಹೇಳಲಾಗಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಈ ಬದಲಾವಣೆಗಳನ್ನು ಇನ್ನೂ ಸರಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಲಾಗಿಲ್ಲ ಎಂದು ಎನ್ನಲಾಗಿದೆ. ಈ ಪ್ರಸ್ತಾವಗಳನ್ನು ಸಶಸ್ತ್ರ ಸೇನಾಪಡೆಗಳು ಇನ್ನೂ ಚರ್ಚಿಸುತ್ತಿವೆ ಎಂದು ತಿಳಿದು ಬಂದಿದೆ.

ಈ ಯೋಜನೆಯ ಬದಲಾವಣೆ ಕುರಿತು ಸೇನಾಪಡೆಗಳು ಚರ್ಚಿಸುತ್ತಿರುವ ಪ್ರಸ್ತಾವಗಳ ಪೈಕಿ ಅಗ್ನಿವೀರ್ ಯೋಧರ ತರಬೇತಿ ಮುಗಿದ ನಂತರ ಸೇನಾಪಡೆಗಳಲ್ಲೇ ಉಳಿಸಿಕೊಳ್ಳಲು ಈಗಿರುವ ಶೇ. 25ರ ಮಿತಿಯನ್ನು ಶೇ. 60-70ಕ್ಕೆ ಏರಿಸುವುದು ಹಾಗೂ ವಿಶೇಷ ಪಡೆಗಳು ಸೇರಿದಂತೆ ಸಶಸ್ತ್ರ ಸೇನಾಪಡೆಗಳಿಗೆ ಅಗತ್ಯವಿರುವ ತಾಂತ್ರಿಕ ಹಾಗೂ ತಜ್ಞ ಯೋಧರ ಪ್ರಮಾಣವನ್ನು ಶೇ. 75ಕ್ಕೆ ಏರಿಸುವ ಪ್ರಸ್ತಾವಗಳು ಸೇರಿವೆ.

ಸೇನಾಪಡೆಗಳು ಸಂಗ್ರಹಿಸಿರುವ ಅನಿಸಿಕೆಗಳ ಪೈಕಿ ಅಗ್ನಿವೀರ್ ಯೋಧರ ನಡುವೆ ಒಗ್ಗಟ್ಟು ಹಾಗೂ ಗೆಳೆತನದ ಬದಲು ಸೇನಾಪಡೆಗಳೊಳಗೆ ಸೇರ್ಪಡೆಯಾಗಲು ಸ್ಪರ್ಧಾತ್ಮಕತೆ ಹಾಗೂ ಸಹಯೋಗ ರಾಹಿತ್ಯ ಕಂಡು ಬಂದಿದ್ದು, ಇದರಿಂದ ಅಗ್ನಿವೀರ್ ಯೋಧರ ನಡುವೆ ವಿಶ್ವಾಸದ ಕೊರತೆ ಎದುರಾಗಿದೆ ಎಂಬ ಸಂಗತಿ ಬಯಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೇನಾಪಡೆಯ ಅಧಿಕಾರಿಯೊಬ್ಬರು, “ಸಶಸ್ತ್ರ ಪಡೆಗಳು ಬಯಸುವ ಗುಣಮಟ್ಟ ಇದಲ್ಲ. ಹೀಗಾಗಿ ಅಗ್ನಿವೀರ್ ಯೋಧರನ್ನು ಸೇನಾಪಡೆಗಳಲ್ಲಿ ಉಳಿಸಿಕೊಳ್ಳುವ ಶೇಕಡಾವಾರು ಪ್ರಮಾಣವನ್ನು ಏರಿಕೆ ಮಾಡುವತ್ತ ಗಮನ ಹರಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿದ್ದಾರೆ. ಶೇ. 50ರಷ್ಟು ಅಗ್ನಿವೀರ್ ಯೋಧರನ್ನು ಇತರ ಸೇವೆಗಳಲ್ಲಿ ಸೇನಾಪಡೆಗಳಲ್ಲೇ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

ನಿಯಮಿತ ಸೇವೆಯ ಆಧಾರದಲ್ಲಿ ನೇಮಕಗೊಳ್ಳುವ ಯೋಧ ಹಾಗೂ ಅಗ್ನಿಪಥ ಯೋಜನೆಯಡಿ ನೇಮಕವಾಗುವ ಯೋಧರಿಗಿರುವ ದೊಡ್ಡ ವ್ಯತ್ಯಾಸವೆಂದರೆ, ನಿಯಮಿತ ಸೇವೆಯ ಆಧಾರದಲ್ಲಿ ನೇಮಕವಾಗುವ ಯೋಧರು ನಿವೃತ್ತಿಯ ನಂತರ ಪಿಂಚಣಿಯನ್ನು ಪಡೆಯುತ್ತಾರೆ. ಅದೇ ಅಗ್ನಿವೀರ್ ಯೋಜನೆಯಡಿ ನೇಮಕಗೊಂಡು, ನಾಲ್ಕು ವರ್ಷಗಳ ತರಬೇತಿಯ ನಂತರ ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಶೇ. 25ರಷ್ಟು ಅಗ್ನಿವೀರರ ಪೈಕಿ ಇಲ್ಲದ ಅಗ್ನಿವೀರ್ ಯೋಧರಿಗೆ ಇಂತಹ ಯಾವುದೇ ಪಿಂಚಣಿ ಸವಲತ್ತು ದೊರೆಯುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News