ದೇವಸ್ಥಾನದ ಪ್ರಸಾದ ತಿಂದ ಅಂಗವಿಕಲ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು
ಹೊಸದಿಲ್ಲಿ: ದಿಲ್ಲಿಯ ಸುಂದರ್ ನಗರಿ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಪ್ರಸಾದ ತಿಂದಿದ್ದಾರೆ ಎಂದು ಆರೋಪಿಸಿ ಅಂಗವಿಕಲ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ.
ಮುಹಮ್ಮದ್ ಇಸ್ರಾರ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಜನರ ಗುಂಪೊಂದು ಥಳಿಸಿದ್ದು, ತೀವ್ರ ಥಳಿತಕ್ಕೊಳಗಾದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಗುಂಪೊಂದು ವ್ಯಕ್ತಿಯ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡುವುದು ಕಂಡುಬಂದಿದೆ.
ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ ವೀಡಿಯೊಗಳ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ರಾರ್ ನನ್ನು ನೆರೆಯ ಆಮಿರ್ ಮಂಗಳವಾರ ಸಂಜೆ ರಿಕ್ಷಾದಲ್ಲಿ ಕರೆದುಕೊಂಡು ಬಂದು ಮನೆಗೆ ಬಿಟ್ಟಿದ್ದಾರೆ. ಅನಂತರ ಇಸ್ರಾರ್ ಮನೆಯ ಹೊರಗೆ ನೋವಿನಿಂದ ಮಲಗಿದ್ದ. ಆತನ ದೇಹದ ತುಂಬ ಗಾಯದ ಗುರುತುಗಳು ಇದ್ದುವು ಎಂದು ಸುಂದರ್ ನಗರಿಯ ಹಣ್ಣಿನ ವ್ಯಾಪಾರಿಯಾಗಿರುವ ಇಸ್ರಾರ್ನ ತಂದೆ ಅಬ್ದುಲ್ ವಾಜಿದ್ ಮಾಹಿತಿ ನೀಡಿರುವುದಾಗಿ ಪೊಲೀಸ್ ಉಪ ಆಯುಕ್ತ ಜಾಯ್ ತಿರ್ಕೆ ತಿಳಿಸಿದ್ದಾರೆ.
ಸಂಜೆ ಸುಮಾರು 5 ಗಂಟೆಗೆ ಕೆಲವು ಯುವಕರು ನನ್ನನ್ನು ಜಿ4 ಬ್ಲಾಕ್ ಸಮೀಪ ಸೆರೆ ಹಿಡಿದರು. ಕಳ್ಳನೆಂದು ಆರೋಪಿಸಿದರು. ಅನಂತರ ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿದರು. ಅವರೆಲ್ಲರೂ ಜಿ4 ಬ್ಲಾಕ್ನಲ್ಲಿ ವಾಸಿಸುವವರು ಎಂದು ಇಸ್ರಾರ್ ಸಂಜೆ 5 ಗಂಟೆಗೆ ತನಗೆ ತಿಳಿಸಿದ್ದ. ಅನಂತರ ನಾವು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ಆತ ಮೃತಪಟ್ಟ ಎಂದು ಅಬ್ದುಲ್ ವಾಜಿದ್ ತಿಳಿಸಿರುವುದಾಗಿ ಅವರು ಹೇಳಿದ್ದಾರೆ. ಈ ಘಟನೆಯ ಹಿಂದೆ ಕೋಮು ಆಯಾಮವನ್ನು ಪೊಲೀಸರು ನಿರಾಕರಿಸಿದ್ದಾರೆ. ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇಸ್ರಾರ್ ಹಲ್ಲೆ ನಡೆಸಿ, ಹತ್ಯೆಗೈದ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.