2019ರಿಂದ 18,179 ದತ್ತು ಸ್ವೀಕಾರ, ಕೇವಲ 1,404 ಭಿನ್ನಚೇತನ ಮಕ್ಕಳಿಗೆ ದತ್ತು ಭಾಗ್ಯ
ಹೊಸದಿಲ್ಲಿ: ಅಧಿಕೃತ ದತ್ತಾಂಶಗಳ ಪ್ರಕಾರ 2019ರಿಂದ 18,179 ದತ್ತು ಸ್ವೀಕಾರಗಳು ದಾಖಲಾಗಿದ್ದು, ಐದು ವರ್ಷಗಳಲ್ಲಿ ದತ್ತು ಸ್ವೀಕಾರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಕೇವಲ 1,404 ಭಿನ್ನ ಚೇತನ ಮಕ್ಕಳಿಗೆ ಈ ಭಾಗ್ಯ ಲಭಿಸಿದೆ.
ದತ್ತು ಸ್ವೀಕಾರಕ್ಕೆ ಅರ್ಹ ಭಿನ್ನ ಚೇತನ ಮಕ್ಕಳ ಸಂಖ್ಯೆಯು ಹೆಚ್ಚಾಗಿದ್ದರೂ ಅವರ ದತ್ತು ಸ್ವೀಕಾರವು ಈಗಲೂ ಗಮನಾರ್ಹವಾಗಿ ಕಡಿಮೆಯಿದೆ.
ಭಿನ್ನ ಚೇತನ ಮಕ್ಕಳಿಗೆ ದೈಹಿಕ,ಬೆಳವಣಿಗೆ,ನಡವಳಿಕೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದಾಗಿ ಹೆಚ್ಚುವರಿ ಕಾಳಜಿಯ ಅಗತ್ಯವಿರುತ್ತದೆ.
2019-20ರಿಂದ 2023-24ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು 18,179 ದತ್ತು ಸ್ವೀಕಾರಗಳು ದಾಖಲಾಗಿವೆ. ಈ ಪೈಕಿ 16,074 ಮಕ್ಕಳನ್ನು ಭಾರತೀಯರು ಮತ್ತು 2,105 ಮಕ್ಕಳನ್ನು ವಿದೇಶಿಯರು ದತ್ತು ಪಡೆದಿದ್ದಾರೆ. ಒಟ್ಟು 1,404 ಭಿನ್ನ ಚೇತನ ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ ಎಂದು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ(ಸಿಎಆರ್ಎ)ವು ಆರ್ಟಿಐ ಅರ್ಜಿಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ಭಿನ್ನ ಚೇತನ ಮಕ್ಕಳ ದತ್ತು ಸ್ವೀಕಾರ ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಹೆಚ್ಚಳವನ್ನು ತೋರಿಸಿದೆ. 2023-24ರಲ್ಲಿ ಸ್ವಲ್ಪ ಮಟ್ಟಿನ ಕುಸಿತದ ಹೊರತಾಗಿಯೂ ಭಿನ್ನ ಚೇತನ ಮಕ್ಕಳ ದತ್ತು ಸ್ವೀಕಾರಗಳು ಹೆಚ್ಚುತ್ತಿವೆ ಎಂದು ಒಟ್ಟಾರೆ ಪ್ರವೃತ್ತಿಯು ಸೂಚಿಸಿದೆ.
ಆದರೆ ದತ್ತು ಪಡೆಯಲು ಲಭ್ಯವಿರುವ ಗಮನಾರ್ಹ ಸಂಖ್ಯೆಯ ಮಕ್ಕಳು ಈ ವರ್ಗಕ್ಕೆ ಸೇರಿದ್ದಾರೆ ಎನ್ನುವುದು ಒಳಗೊಂಡಂತೆ ಸವಾಲುಗಳು ಮುಂದುವರಿದಿವೆ.
ಸಿಎಆರ್ಎ ಪ್ರಕಾರ 2024,ಜು.5ಕ್ಕೆ ಇದ್ದಂತೆ ದೇಶಾದ್ಯಂತ ವಿವಿಧ ಶಿಶುಪಾಲನಾ ಸಂಸ್ಥೆಗಳಲ್ಲಿ 420 ಭಿನ್ನ ಚೇತನ ಮಕ್ಕಳು ದತ್ತು ಸ್ವೀಕಾರಕ್ಕಾಗಿ ಕಾಯುತ್ತಿದ್ದರು.