2040ರ ಹೊತ್ತಿಗೆ ಭಾರತದಲ್ಲಿ 6.2 ಕೋಟಿಗೂ ಹೆಚ್ಚು ಕ್ಷಯ ಪ್ರಕರಣಗಳು : ವರದಿ
ಹೊಸದಿಲ್ಲಿ: 2021-2040ರ ನಡುವೆ ಭಾರತದಲ್ಲಿ 6.2 ಕೋಟಿಗೂ ಹೆಚ್ಚು ಕ್ಷಯ ರೋಗಗಳು ಹಾಗೂ 80 ಲಕ್ಷ ಕ್ಷಯ ಸಂಬಂಧಿ ಸಾವುಗಳು ವರದಿಯಾಗುವ ಸಾಧ್ಯತೆ ಇದೆ, ಭಾರತದ ಜಿಡಿಪಿಯು 146 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ನಷ್ಟ ಅನುಭವಿಸಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕ್ಷಯ ರೋಗದಿಂದ ಕಡಿಮೆ ಆದಾಯದ ಕುಟುಂಬಗಳು ಆರೋಗ್ಯ ಸಂಬಂಧಿ ಹೊರೆಯ ಪ್ರಮಾಣವನ್ನು ಹೆಚ್ಚು ಅನುಭವಿಸಲಿದ್ದರೆ, ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಆರ್ಥಿಕ ಹೊರೆ ಪ್ರಮಾಣವನ್ನು ಹೆಚ್ಚು ಅನುಭವಿಸಲಿವೆ ಎಂದು ಬ್ರಿಟನ್‌ನ ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್ ಸಂಸ್ಥೆ ಸೇರಿದಂತೆ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಕ್ಷಯ ರೋಗ ಬ್ಯಾಕ್ಟೀರಿಯಾ ಜನ್ಯ ರೋಗವಾಗಿದ್ದು, ಯಾವುದೇ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಗಾಳಿಯ ಮೂಲಕ ಹರಡುತ್ತದೆ. ಮುಖ್ಯವಾಗಿ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡುವ ಕ್ಷಯ ರೋಗ, ಇತರ ಅಂಗಾಂಗಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಮಾರಣಾಂತಿಕ ರೋಗವಾಗಿದೆ. ನಿರಂತರ ಕೆಮ್ಮು, ಎದೆ ನೋವು, ಜ್ವರ ಹಾಗೂ ಆಯಾಸ ಈ ರೋಗದ ಲಕ್ಷಣಗಳಾಗಿವೆ.
ಪ್ರಕರಣ ಪತ್ತೆ ಸುಧಾರಣಾ ದರ ಇದೀಗ ಶೇ. 63ರಷ್ಟಿದ್ದು, ಕ್ಷಯ ರೋಗವನ್ನು ಅಂತ್ಯಗೊಳಿಸುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಹಾಗೂ ಶೇ. 90ರ ಪ್ರಕರಣ ಪತ್ತೆ ಸುಧಾರಣಾ ದರದಿಂದ ರೋಗ ಪತ್ತೆ ಹಾಗೂ ಪ್ರಾದೇಶಿಕ ರೋಗವನ್ನು ಶೇ. 75-90ರಷ್ಟು ಇಳಿಕೆ ಮಾಡಬಹುದಾಗಿದೆ. ಇದರೊಂದಿಗೆ, ತೀವ್ರ ಆರ್ಥಿಕ ಹೊರೆಯ ಪ್ರಮಾಣವನ್ನು 120.2 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡಬಹುದಾಗಿದೆ ಎಂದು PLoS Medicine ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲಿ ಅಂದಾಜಿಸಲಾಗಿದೆ.