ಭಾರತದ ಹೆಸರು ಬದಲಾದರೆ 'ಇಂಡಿಯಾ' ಪದದ ಮೇಲೆ ಪಾಕ್ ಹಕ್ಕು ಸ್ಥಾಪಿಸಬಹುದು: ವರದಿ

Pakistan may lay claim on name 'India' if Modi govt derecognises it officially at UN

Update: 2023-09-06 06:38 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಜಿ20 ಔತಣಕೂಟ ಆಮಂತ್ರಣ ಪತ್ರಿಕೆಯಲ್ಲಿ ರೂಢಿಗತವಾಗಿ ಬರೆಯಲಾಗುವ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಬರೆದಿರುವುದು, ಸರಕಾರವು ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್‌ ಎಂದು ಬದಲಾಯಿಸಲು ಮುಂದಾಗಿದೆ ಎಂಬುದರ ಸಂಕೇತ ಎಂದು ವಿಪಕ್ಷಗಳು ಹೇಳುತ್ತಿರುವ ನಡುವೆಯೇ ಇನ್ನೊಂದು ಕುತೂಹಲಕಾರಿ ವಿದ್ಯಮಾನ ನೆರೆಯ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಪಾಕಿಸ್ತಾನವು “ಇಂಡಿಯಾ” ಹೆಸರಿನ ಮೇಲೆ ಹಕ್ಕು ಸ್ಥಾಪಿಸಲು ಯತ್ನಿಸಬಹುದು ಎಂದು ಅಲ್ಲಿನ ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು theweek.in ವರದಿ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸೌತ್‌ ಏಷ್ಯಾ ಇಂಡೆಕ್ಸ್‌, –“ವಿಶ್ವ ಸಂಸ್ಥೆ ಮಟ್ಟದಲ್ಲಿ “ಇಂಡಿಯಾ” ಹೆಸರನ್ನು ಅಮಾನ್ಯಗೊಳಿಸಿದ್ದೇ ಆದಲ್ಲಿ ಪಾಕಿಸ್ತಾನ ಆ ಹೆಸರಿನ ಮೇಲೆ ಹಕ್ಕು ಸ್ಥಾಪಿಸಲು ಯತ್ನಿಸಬಹುದು,”- ಸ್ಥಳೀಯ ಮಾಧ್ಯಮ,” ಎಂದು ಹೇಳಿದೆ.

“ಈ ಹೆಸರು ಇಂಡಸ್‌ ಪ್ರಾಂತ್ಯವನ್ನು ಸೂಚಿಸುವುದರಿಂದ ಅದರ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯವಾದಿಗಳು ಬಹಳ ಸಮಯದಿಂದ ವಾದಿಸುತ್ತಾ ಬಂದಿದ್ದಾರೆ.” ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಇದೇ ಹ್ಯಾಂಡಲ್‌ ಇನ್ನೊಂದು ಟ್ವೀಟ್‌ನಲ್ಲಿ ಭಾರತ ಸರ್ಕಾರವು ದೇಶವನ್ನು ವಸಾಹತುಶಾಹಿ ಮುಕ್ತಗೊಳಿಸಲು ‘ಇಂಡಿಯಾ’ ಬದಲು ‘ಭಾರತ’ ಎಂದು ಹೆಸರನ್ನು ಬದಲಾಯಿಸಲು ಸಜ್ಜಾಗಿದೆ ಎಂದು ಬರೆದಿದೆ.

ಆದರೆ ಇಲ್ಲಿಯ ತನಕ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

“ಇಂಡಿಯಾ ಹೆಸರು ಇಂಡಸ್‌ ಪ್ರಾಂತ್ಯವನ್ನು ಸೂಚಿಸುತ್ತದೆ, ಇದು ವಿಶಾಲ ಇಂಡಸ್‌ ನದಿ ದಂಡೆ ಪ್ರದೇಶ ಹಾಗೂ ಆಧುನಿಕ ಪಾಕಿಸ್ತಾನದ ಬಹುಪಾಲಲ್ಲಿದೆ,” ಎಂದು ಈ ಹ್ಯಾಂಡಲ್‌ ಟ್ವೀಟ್‌ ಮಾಡಿದೆಯಲ್ಲದೆ “ಸ್ವತಂತ್ರ ದೇಶಕ್ಕೆ”ಇಂಡಿಯಾ” ಹೆಸರನ್ನು ಇಡುವ ಕುರಿತು ಜಿನ್ನಾ ಆಗ ಬ್ರಿಟಿಷರಲ್ಲಿ ಆಕ್ಷೇಪಿಸಿದ್ದರು ಹಾಗೂ ಹಿಂದುಸ್ತಾನ್‌ ಅಥವಾ ಭಾರತ ಹೆಸರು ಶಿಫಾರಸು ಮಾಡಿದ್ದರು,” ಎಂದು ಹೇಳಿದೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಒಂದು ತಿಂಗಳ ನಂತರ ಮುಹಮ್ಮದ್‌ ಅಲಿ ಜಿನ್ನಾ ಅವರು ಲೂಯಿಸ್‌ ಮೌಂಟ್‌ಬ್ಯಾಟನ್‌ ಅವರು ಕಲಾ ಪ್ರದರ್ಶನವೊಂದಕ್ಕೆ ಗೌರವ ಅಧ್ಯಕ್ಷರಾಗಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದರು. ಇದಕ್ಕೆ ಕಾರಣ ಆಹ್ವಾನ ಪತ್ರಿಕೆಯಲ್ಲಿ ಹಿಂದುಸ್ತಾನ್‌ ಬದಲು ಇಂಡಿಯಾ ಬರೆಯಲಾಗಿತ್ತು. “ಯಾವುದೇ ನಿಗೂಢ ಕಾರಣಕ್ಕೆ ಹಿಂದುಸ್ತಾನವು ಇಂಡಿಯಾ ಪದ ಬಳಸುತ್ತಿರುವುದು ಕಳವಳಕಾರಿ, ಈ ಹೆಸರು ತಪ್ಪು ದಾರಿಗೆಳೆಯುತ್ತದೆ ಮತ್ತು ಗೊಂದಲ ಸೃಷ್ಟಿಸುತ್ತದೆ,” ಎಂದು ಆಗ ಜಿನ್ನಾ ಅವರು ಮೌಂಟ್‌ ಬ್ಯಾಟನ್‌ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದರು ಎಂದು ಸೌತ್‌ ಏಷ್ಯಾ ಇಂಡೆಕ್ಸ್‌ ಟ್ವೀಟ್‌ ಹೇಳಿದೆ.

ಭಾರತದ ಬಲಪಂಥೀಯರು ಬಹಳ ಹಿಂದಿನಿಂದಲೂ “ಇಂಡಿಯಾ” ಹೆಸರಿನಿಂದ ದೂರವುಳಿದಿದ್ದಾರೆ,” ಎಂದೂ ಸೌತ್‌ ಏಷ್ಯಾ ಇಂಡೆಕ್ಸ್‌ ಟ್ವೀಟ್‌ ಹೇಳಿದೆ.

ಈ ನಡುವೆ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್‌ ಪ್ರತಿಕ್ರಿಯಿಸಿ ದೇಶದ ಮೂಲ ಹೆಸರು ನಿಸ್ಸಂಶಯವಾಗಿ ಭಾರತ್‌ ಆಗಿತ್ತು, ಬ್ರಿಟಿಷರು ಅದನ್ನು ಇಂಡಿಯಾ ಅನ್ನುತ್ತಿದ್ದರು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News