ನಕಲಿ ಖಾತೆಯಿಂದ ಓಂ ಬಿರ್ಲಾ ಪುತ್ರಿ ಕುರಿತು ಸುಳ್ಳು ಸಂದೇಶ: ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಪ್ರಕರಣ ದಾಖಲು
ಮುಂಬೈ: ನಕಲಿ ಖಾತೆಯೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಕುರಿತು ಸುಳ್ಳು ಸಂದೇಶವನ್ನು ಪೋಸ್ಟ್ ಮಾಡಿದ ಬಳಿಕ ಮಹಾರಾಷ್ಟ್ರದ ಸೈಬರ್ ಪೋಲಿಸರು ಖ್ಯಾತ ಯುಟ್ಯೂಬರ್ ಧ್ರುವ್ ರಾಠಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.
ರಾಜ್ಯ ಸೈಬರ್ ಇಲಾಖೆಯ ಪ್ರಕಾರ @dhruvrahtee ಹ್ಯಾಂಡಲ್ ಹೊಂದಿರುವ ಖಾತೆಯು, ಅಂಜಲಿ ಬಿರ್ಲಾ ಅವರು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ಪರೀಕ್ಷೆಗೆ ಹಾಜರಾಗದೇ ಅದರಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಹೇಳಿಕೊಂಡಿತ್ತು.
‘ಇದು ಅಭಿಮಾನಿ ಮತ್ತು ವಿಡಂಬನಾತ್ಮಕ ಖಾತೆಯಾಗಿದೆ ಮತ್ತು ಧ್ರುವ ರಾಠಿ ಅವರ ಮೂಲ ಖಾತೆಯೊಂದಿಗೆ ಸಂಯೋಜಿತವಾಗಿಲ್ಲ. ಯಾರನ್ನೂ ಅನುಕರಿಸುತ್ತಿಲ್ಲ, ಇದು ಅಣಕು ಖಾತೆಯಾಗಿದೆ’ ಎಂದು ಖಾತೆಯ ಎಕ್ಸ್ ಬಯೊ ಹೇಳಿಕೊಂಡಿದೆ.
ಬಿರ್ಲಾರ ಸಂಬಂಧಿಯೋರ್ವರ ದೂರಿನ ಮೇರೆಗೆ ರಾಠಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ವಿವಿಧ ಕಲಮ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ನಕಲಿ ಖಾತೆಯಿಂದ ಶನಿವಾರ ಇನ್ನೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದ್ದು,‘ @MahaCyber1 ನಿರ್ದೇಶನದಂತೆ ನಾನು ಅಂಜಲಿ ಬಿರ್ಲಾ ಕುರಿತು ನನ್ನ ಎಲ್ಲ ಪೋಸ್ಟ್‌ಗಳು ಮತ್ತ ಕಮೆಂಟ್‌ಗಳನ್ನು ಅಳಿಸಿದ್ದೇನೆ. ಸತ್ಯ ನನಗೆ ತಿಳಿದಿರಲಿಲ್ಲ ಮತ್ತು ನಾನು ಬೇರೊಬ್ಬರ ಟ್ವೀಟ್‌ಗಳನ್ನು ನಕಲು ಮಾಡಿ ಹಂಚಿಕೊಂಡಿದ್ದರಿಂದ ಕ್ಷಮೆ ಯಾಚಿಸಲು ಬಯಸುತ್ತೇನೆ’ ಎಂದು ಹೇಳಲಾಗಿದೆ.
ಸುಳ್ಳು ಸಂದೇಶವನ್ನು ಅಣಕು ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು, ರಾಠಿ ಅವರ ಖಾತೆಯಿಂದಲ್ಲ ಎನ್ನುವುದನ್ನು ಸುದ್ದಿಸಂಸ್ಥೆಯು ಬೆಟ್ಟು ಮಾಡಿದಾಗ ಅಧಿಕಾರಿ, ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.