ಪಾಟ್ನಾ ಹಿಂಸಾಚಾರ: ಬಿಜೆಪಿಯ 63 ನಾಯಕರ ವಿರುದ್ಧ ಪ್ರಕರಣ ದಾಖಲು
ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಆಯೋಜಿಸಿದ್ದ ‘ವಿಧಾನ ಸಭಾ ಮಾರ್ಚ್’ನ ಸಂದರ್ಭ ಪಾಟ್ನಾ ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಬಿಜೆಪಿಯ 63 ನಾಯಕರು ಹಾಗೂ 7,000-8,000 ಅನಾಮಿಕ ವ್ಯಕಿಗಳ ವಿರುದ್ಧ ಪಾಟ್ನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಅಧ್ಯಾಪಕರ ನೇಮಕಾತಿಯ ನೂತನ ನೀತಿ ವಿರುದ್ದ ಬಿಜೆಪಿ ರ್ಯಾಲಿ ನಡೆಸಿತ್ತು. ಪಾಟ್ನಾದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಕಾನೂನು ಹಾಗೂ ಸುವ್ಯವಸ್ಥೆ) ಶಶಿಭೂಷಣ್ ಕುಮಾರ್ ಅವರು 63 ಬಿಜೆಪಿ ನಾಯಕರ ವಿರುದ್ಧ ಪಾಟ್ನಾದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಕುಮಾರ್ ಅವರ ಹೇಳಿಕೆಯ ಆಧಾರದಲ್ಲಿ ಮಾಜಿ ಕೇಂದ್ರ ಸಚಿವ ರಾಮ್ ಕೃಪಾಲ್ ಯಾದವ್, ಮಾಜಿ ಉಪ ಮುಖ್ಯಮಂತ್ರಿಗಳಾದ ತಾರ್ ಕಿಶೋರ್ ಪ್ರಸಾದ್ ಹಾಗೂ ರೇಣು ದೇವಿ, ಔರಂಗಾಬಾದ್ ಸಂಸದ ಸುಶೀಲ್ ಕುಮಾರ್ ಸಿಂಗ್, ಬಿಹಾರದ ಮಾಜಿ ಸಚಿವರಾದ ನಿತಿನ್ ನಬಿನ್, ಶಹನವಾಝ್ ಹುಸೈನ್ ಹಾಗೂ ಮಂಗಲ್ ಪಾಂಡೆ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಕುಮಾರ್, ಬಿಜೆಪಿಯ ಎಸೆಂಬ್ಲಿ ಮಾರ್ಚ್ ಸಂದರ್ಭ ತನ್ನನ್ನು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿತ್ತು.
ಇದ್ದಕ್ಕಿದ್ದಂತೆ ಬಿಜೆಪಿ ಕಾರ್ಯಕರ್ತರ ಗುಂಪು ಘೋಷಣೆಗಳನ್ನು ಕೂಗಿತು ಎಂದು ಪ್ರತಿಪಾದಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಗುಂಪು ಡಾಕ್ ಬಂಗ್ಲೆಗೆ ತಲುಪಿತು, ಬ್ಯಾರಿಕೇಡ್ಗಳನ್ನು ಮುರಿದು ಹಾಕಿತು ಹಾಗೂ ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸರಿಗೆ ಬ್ಯಾನರ್ನ ದೊಣ್ಣೆಗಳಿಂದ ಥಳಿಸಿತು. ಘೋಷಣೆಗಳು ಕೂಗುವ ಸಂದರ್ಭ ಪ್ರತಿಭಟನಕಾರರು ಪೊಲೀಸರ ಮುಖಕ್ಕೆ ಮೆಣಸಿನ ಹುಡಿಯನ್ನು ಕೂಡ ಎರಚಿದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಈ ನಡುವೆ ಕೆಲವು ಕಾರ್ಯಕರ್ತರು ಆಕ್ರೋಶಿತರಾದರು ಹಾಗೂ ಬ್ಯಾರಿಕೇಡ್ಗೆ ದೊಣ್ಣೆಗಳಿಂದ ಹೊಡೆಯಲು ಆರಂಭಿಸಿದರು ಬ್ಯಾರಿಕೇಡ್ಗಳನ್ನು ಏರಿ ಇಳಿದು ಪೊಲೀಸರ ಮೇಲೆ ದಾಳಿ ನಡೆಸಿದರು.
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಜಲ ಪಿರಂಗಿ ಬಳಿಸಿದರು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ದಾಳಿಯ ಸಂದರ್ಭ ಒಟ್ಟು 60 ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಅವರನ್ನು ಅನಂತರ ಬಾಂಡ್ ಮೇಲೆ ಬಿಡುಗಡೆಗೊಳಿಸಲಾಯಿತು. ಈ ನಡುವೆ ಬಿಜೆಪಿ ಎಸೆಂಬ್ಲಿ ಮಾರ್ಚ್ ಸಂದರ್ಭ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ತನಿಖೆಗೆ ನಾಲ್ವರು ಸದಸ್ಯರ ತಂಡವನ್ನು ಗುರುವಾರ ರೂಪಿಸಿದೆ. ತಂಡ ಸಂಚಾಲಕರಾಗಿ ಜಾರ್ಖಂಡ್ನ ಮಾಜಿ ಮುಖ್ಯಂತ್ರಿ ರಘುಬರ ದಾಸ್ ಹಾಗೂ ಸದಸ್ಯರಾಗಿ ಮನೋಜ್ ತಿವಾರಿ, ವಿಷ್ಣು ದಯಾಲ್ ರಾಮ್ ಹಾಗೂ ಸುನಿತಾ ದುಗ್ಗಾಲ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನಿಯೋಜಿಸಿದ್ದಾರೆ. ಈ ತಂಡ ರವಿವಾರ ಪಾಟ್ನಾ ತಲುಪುವ ಸಾಧ್ಯತೆ ಇದೆ.