ಆಂಧ್ರದಲ್ಲಿ ಬಂಧನವಾದ ಪಿಎಫ್‌ಐ ನಾಯಕನಿಗೂ ಬೆಂಗಳೂರು ಸ್ಪೋಟಕ್ಕೂ ಸಂಬಂಧವಿಲ್ಲ: ಪೊಲೀಸ್‌ ಸ್ಪಷ್ಟನೆ

Update: 2024-03-05 10:42 GMT

Photo: X

ಬೆಂಗಳೂರು: ಆಂಧ್ರಪ್ರದೇಶದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡ ಅಬ್ದುಲ್‌ ಸಲೀಂ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿರುವುದನ್ನು ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ತಳುಕು ಹಾಕಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಈ ವರದಿಯನ್ನು ಬಲಪಂಥೀಯರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಪಿಎಫ್‌ಐ ನಿಷೇಧದ ಬಳಿಕ ಅದರ ನಾಯಕರ ಬೆನ್ನು ಬಿದ್ದಿರುವ ಎನ್‌ಐಎ ಆಂಧ್ರದ ಕಡಪ ಜಿಲ್ಲೆಯ ಮೈದುಕೂರು ಮಂಡಲಂ ಚೆರ್ಲೋಪಲ್ಲಿಯಿಂದ ಅಬ್ದುಲ್‌ ಸಲೀಂ ಎಂಬಾತನನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ, ಕೆಲವು ಮಾಧ್ಯಮಗಳು ಪಿಎಫ್‌ಐ ನಾಯಕನ ಬಂಧನವನ್ನು ಬೆಂಗಳೂರು ನಗರದ ಹೆಚ್ಎಎಲ್ ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ಮಾಡಿದ್ದವು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಡಪ ಪೊಲೀಸರು, ತೆಲಂಗಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ಸಲೀಂನನ್ನು ಬಂಧಿಸಲಾಗಿದೆ. ಬೆಂಗಳೂರಿನ ಸ್ಪೋಟ ಪ್ರಕರಣಕ್ಕೂ ಈ ಬಂಧನಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ಪೊಲೀಸರು ಕೂಡಾ ಇದನ್ನು ಧೃಡಪಡಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ನ ಮಹಮ್ಮದ್‌ ಝುಬೈರ್‌ ಅವರು ಟ್ವೀಟ್‌ ಮಾಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News