ಅನರ್ಹತೆ ಮೇಲ್ಮನವಿ ಪ್ರಶ್ನಿಸಿದ್ದ ಅರ್ಜಿ ವಜಾ ಬಳಿಕ ಫೋಗಟ್ ಪೋಸ್ಟ್ ವೈರಲ್
ಹೊಸದಿಲ್ಲಿ: ಪ್ಯಾರೀಸ್ ಒಲಿಂಪಿಕ್ಸ್ ನ 50 ಕೆ.ಜಿ ಕುಸ್ತಿ ವಿಭಾಗದ ಸ್ಪರ್ಧೆಯಿಂದ ಅನರ್ಹಗೊಂಡ ಬೆನ್ನಲ್ಲೇ ಒಲಿಂಪಿಕ್ ಬೆಳ್ಳಿ ಪದಕಕ್ಕಾಗಿ ಮಾಡಿದ್ದ ಅರ್ಜಿ ವಜಾಗೊಂಡ ಬಳಿಕ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ನಿಗೂಢ ಪೋಸ್ಟ್ ವೈರಲ್ ಆಗಿದೆ.
ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋಟ್ರ್ಸ್ (ಸಿಎಎಸ್) ಬುಧವಾರ ಹೇಳಿಕೆ ನೀಡಿ, "ವಿನೇಶ್ ಫೋಗಟ್ ಆಗಸ್ಟ್ 7ರಂದು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ" ಎಂದು ದೃಢಪಡಿಸಿತ್ತು. ಗುರುವಾರ ಫೋಗಟ್ ಇನ್ಸ್ಟಾಗ್ರಾಂನಲ್ಲಿ ಗುರುವಾರ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಣ್ಣುಗಳನ್ನು ಕೈಯಿಂದ ಮುಚ್ಚಿಕೊಂಡು ಮ್ಯಾಟ್ ಮೇಲೆ ಮಲಗಿರುವ ಈ ಚಿತ್ರ ಹತಾಶೆಯ ಭಾವನೆಯನ್ನು ಸೂಚಿಸುತ್ತದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಪ್ರಕಾರ, ಆಗಸ್ಟ್ 13ರಂದು ರಾತ್ರಿ 9.30ಕ್ಕೆ ತೀರ್ಪು ನಿಗದಿಯಾಗಿತ್ತು. ಆದರೆ ಆಗಸ್ಟ್ 16ಕ್ಕೆ ತೀರ್ಪು ಪ್ರಕಟಿಸುವುದಾಗಿ ಆ ಬಳಿಕ ತಿಳಿಸಲಾಗಿತ್ತು. ಆದರೆ ಬುಧವಾರವೇ ತೀರ್ಪು ಹೊರಬಿದ್ದಿದೆ. ಈ ಅರ್ಜಿ ತಿರಸ್ಕಾರದ ಹಿನ್ನೆಲೆಯಲ್ಲಿ ಭಾರತ ಮುಂದಿನ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ಐಓಎ ಹೇಳಿದೆ.
ತೀರ್ಪಿನ ಬಗ್ಗೆ ಐಓಎ ಅಧ್ಯಕ್ಷೆ ಪಿ.ಟಿ.ಉಷಾ ಆಘಾತ ಮತ್ತು ನಿರಾಸೆ ವ್ಯಕ್ತಪಡಿಸಿದ್ದಾರೆ. ಸಿಎಎಸ್ ತೀರ್ಪಿನ ಹಿನ್ನೆಲೆಯಲ್ಲಿ ಐಓಎ ಫೋಗಟ್ ಪರವಾಗಿ ನಿಲ್ಲಲಿದೆ ಮತ್ತು ಎಲ್ಲ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಎಂದು ವಿವರಿಸಿದ್ದಾರೆ.
ಕ್ರೀಡೆಯಲ್ಲಿ ನ್ಯಾಯ ಮತ್ತು ನಿಷ್ಪಕ್ಷಪಾತವನ್ನು ಪ್ರತಿಪಾದಿಸುವುದನ್ನು ಐಓಎ ಮುಂದುವರಿಸಲು ಬದ್ಧವಾಗಿದೆ. ಅಥ್ಲೀಟ್ ಗಳ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ 100 ಗ್ರಾಂ ದೇಹತೂಕದ ವ್ಯತ್ಯಾಸವು ವಿನೇಶ್ ಅವರ ವೃತ್ತಿಪರ ಬದುಕಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ, ನಿಯಮಗಳ ಗೊಂದಲಗಳು ಹಾಗೂ ಅವುಗಳ ವಿಶ್ಲೇಷಣೆ ಬಗೆಗಿನ ಗೊಂದಲದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಉಷಾ ಹೇಳಿದ್ದಾರೆ.