ಜಾರ್ಖಂಡ್ ನಲ್ಲಿ ವಿಮಾನ ಪತನ | ತರಬೇತಿ ಪಡೆಯುತ್ತಿದ್ದ ಪೈಲಟ್ ಮೃತದೇಹ ಪತ್ತೆ
ಜೆಮ್ಶೆದ್‌ಪುರ : ಜಾರ್ಖಂಡ್‌ನ ಜೆಮ್ಶೆದ್‌ಪುರದಿಂದ ಹಾರಾಟ ಆರಂಭಿಸಿದ ಬಳಿಕ ನಾಪತ್ತೆಯಾಗಿದ್ದ ಎರಡು ಆಸನಗಳ ವಿಮಾನದಲ್ಲಿದ್ದ ತರಬೇತಿ ಪಡೆಯುತ್ತಿದ್ದ ಪೈಲಟ್‌ನ ಮೃತದೇಹ ಗುರುವಾರ ಚಾಂಡಿಲ್ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ವಾಯು ಯಾನ ಸಂಸ್ಥೆಗೆ ಸೇರಿದ ಸೆಸ್ನಾ 152 ವಿಮಾನ ಸೋನಾರಿ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ ಹಾರಾಟ ಆರಂಭಿಸಿದ ಬಳಿಕ ನಾಪತ್ತೆಯಾಗಿತ್ತು. ವಿಮಾನವನ್ನು ಪತ್ತೆ ಹಚ್ಚಲು ಅಣೆಕಟ್ಟಿನ ಜಲಾಶಯ ಸೇರಿದಂತೆ ಸಮೀಪದ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ವಿಮಾನ ಪತನವಾಗಿದೆ ಎಂದು ಸಂದೇಹಿಸಲಾದ ಜಲಾಶಯದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಬೆಳಗ್ಗೆ ತರಬೇತು ಪಡೆಯುತ್ತಿದ್ದ ಪೈಲಟ್‌ನ ಮೃತದೇಹ ತೇಲುತ್ತಿರುವುದು ಪತ್ತೆಯಾಯಿತು. ಈ ಮೃತದೇಹವನ್ನು ಸರಾಯ್‌ಕೆಲಾ-ಖರಸಾಂವ್ ಜಿಲ್ಲೆಯ ಆದಿತ್ಯಪುರ ನಿವಾಸಿ ತರಬೇತು ಪಡೆಯುತ್ತಿದ್ದ ಪೈಲಟ್ ಸುಭ್ರೋದೀಪ್ ದತ್ತಾ ಅವರದ್ದೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಪಾಟ್ನಾದ ನಿವಾಸಿಯಾಗಿರುವ ಪೈಲಟ್ ಕ್ಯಾಪ್ಟನ್ ಜೀತ್ ಸತ್ರು (35) ಅವರ ಶೋಧ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾ ಪಡೆಯ ತಂಡ ಕೈ ಜೋಡಿಸಿದೆ. ಇದಕ್ಕಾಗಿ ನೌಕಾ ಪಡೆಯ 19 ಸದಸ್ಯರ ತಂಡವನ್ನು ವಿಶಾಖಪಟ್ಟಣದಿಂದ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಣೆಕಟ್ಟಿನ ಜಲಾಶಯದಲ್ಲಿ ಪತನಗೊಂಡಿದೆ ಎಂದು ಗ್ರಾಮಸ್ಥರು ಪ್ರತಿಪಾದಿಸಿದ ಬಳಿಕ ಬುಧವಾರ 6 ಸದಸ್ಯರ ಎನ್‌ಡಿಆರ್‌ಎಫ್ ತಂಡ ಜಲಾಶಯದಲ್ಲಿ ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿತ್ತು ಎಂದು ಪೊಲೀಸ್ ಅಧೀಕ್ಷಕ (ಸರಾಯ್‌ಕೆಲಾ-ಖರಸಾಂವ್) ಮುಖೇಶ್ ಕುಮಾರ್ ಲುನಾಯತ್ ತಿಳಿಸಿದ್ದಾರೆ.