ಕರೀನಾ-ಸೈಫ್‌ ಮಕ್ಕಳಿಗೆ ಅಟೋಗ್ರಾಫ್‌ ಹಾಕಿದ ಪ್ರಧಾನಿ ಮೋದಿ

Update: 2024-12-11 11:16 GMT

PC : X 

ಹೊಸದಿಲ್ಲಿ: ಬಾಲಿವುಡ್‌ ದಂಪತಿಗಳಾದ ಸೈಫ್‌ ಅಲಿ ಖಾನ್‌ ಹಾಗೂ ಕರೀನಾ ಕಪೂರ್‌ ಖಾನ್‌ ಅವರ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಟೋಗ್ರಾಫ್‌ ನೀಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ. ಕರೀನಾ-ಸೈಫ್‌ ದಂಪತಿಗಳನ್ನು ಹಾಗೂ ಅವರ ಮಕ್ಕಳನ್ನು ಬಲಪಂಥೀಯ ಟ್ರೋಲ್‌ ಪಡೆ ಗುರಿಯಾಗಿಸಿರುವ ನಡುವೆಯೇ, ಪ್ರಧಾನಿ ಅವರ ಈ ನಡೆ ಸಾಕಷ್ಟು ಗಮನ ಸೆಳೆದಿದೆ.

ಕೆಲವು ಬಲಪಂಥೀಯರು ಮೋದಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಬಲಪಂಥೀಯರನ್ನು ಟ್ರೋಲ್‌ ಮಾಡಲು ಮೋದಿ ಸಹಿ ಹಾಕುತ್ತಿರುವ ಫೋಟೋಗಳನ್ನು ಬಳಸಿದ್ದಾರೆ.

ಸೈಫ್‌ ಅಲೀ ಖಾನ್‌ ರನ್ನು ವರಿಸಿದ ಬಳಿಕ ನಟಿ ಕರೀನಾ ಕಪೂರ್‌ ಅವರನ್ನು ಬಲಪಂಥೀಯ ಟ್ರೋಲಿಗರು ಸಾಕಷ್ಟು ಗುರಿಯಾಗಿಸಿದ್ದರು. ಅದರಲ್ಲೂ, ಮಕ್ಕಳಿಗೆ ತೈಮೂರ್-ಜಹಾಂಗೀರ್‌ ಹೆಸರನ್ನು ಇಟ್ಟ ಬಳಿಕವಂತೂ ಆನ್‌ಲೈನ್‌ ನಿಂದನೆಗೂ ಸ್ಟಾರ್‌ ದಂಪತಿ ಗುರಿಯಾಗಿದ್ದರು.

ಮೊಘಲ್‌ ದೊರೆಗಳ ಹೆಸರನ್ನು ಮಕ್ಕಳಿಗೆ ಇಡುವ ಮೂಲಕ ದಂಪತಿ ಹಿಂದೂ ವಿರೋಧಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಬಲಪಂಥೀಯರು ಆಕ್ರೋಶ ಹೊರ ಹಾಕುತ್ತಲೇ ಬಂದಿದ್ದು, ಇಂತಹ ಸಂದರ್ಭದಲ್ಲಿ ದಂಪತಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದೆ. ಈ ವೇಳೆ, ಸ್ಟಾರ್‌ ಮಕ್ಕಳಿಗೆ ಮೋದಿ ಅಟೋಗ್ರಾಫ್‌ ನೀಡಿದ್ದಾರೆ.

ತೈಮೂರ್‌, ಜಹಾಂಗೀರ್‌ ಹೆಸರನ್ನು ಮಕ್ಕಳಿಗೆ ಇಟ್ಟಿದಕ್ಕಾಗಿ ಸೈಫ್‌-ಕರೀನಾ ದಂಪತಿಗಳನ್ನು ಮೋದಿ ಭಕ್ತರು ಮೂದಲಿಸುತ್ತಿದ್ದರೆ, ಪ್ರಧಾನಿ ಮೋದಿ ಅವರು ಅದೇ ಮಕ್ಕಳಿಗೆ ಅಟೋಗ್ರಾಫ್‌ ಹಾಕುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಪ್ರಧಾನಿ ಮೋದಿ ಅವರು ದೇಶಭಕ್ತ, ಸಂಸ್ಕಾರವಂತ ಕುಟುಂಬವನ್ನು ಭೇಟಿ ಮಾಡಿ, ಅಟೋಗ್ರಾಫ್‌ ನೀಡುತ್ತಿರುವುದು ಅದ್ಭುತ ಎಂದು ಬಲಪಂಥೀಯ ಬಳಕೆದಾರರೊಬ್ಬರು ತಮ್ಮ ಅಸಮಾಧಾನವನ್ನು ವ್ಯಂಗ್ಯದ ಮೂಲಕ ಹೊರಹಾಕಿದ್ದಾರೆ.

ಡಿಸೆಂಬರ್ 13 ರಂದು ಚಲನಚಿತ್ರೋತ್ಸವದೊಂದಿಗೆ ಪ್ರಾರಂಭವಾಗಲಿರುವ ರಾಜ್ ಕಪೂರ್ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕಪೂರ್ ಕುಟುಂಬ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲು ಭೇಟಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News