ಪ್ರಧಾನಿ ಮೋದಿ ಯುಎಇ ಭೇಟಿ: ಎಂಟು ಒಪ್ಪಂದಗಳಿಗೆ ಸಹಿ
ಹೊಸದಿಲ್ಲಿ: ಭಾರತ ಹಾಗೂ ಯುಎಇ ಮಂಗಳವಾರ ಎಂಟು ಒಪ್ಪಂದಗಳಿಗೆ ಸಹಿ ಮಾಡಿದ್ದು, ಹೂಡಿಕೆ, ವಿದ್ಯುತ್ ವ್ಯಾಪಾರ ಮತ್ತು ಡಿಜಿಟಲ್ ಪಾವತಿ ಪ್ಲಾಟ್ಫಾರಂ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಹಭಾಗಿತ್ವದ ಹೊಸ ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಸಿದರು.
ಎರಡು ದೇಶಗಳ ಪ್ರವಾಸದ ಅಂಗವಾಗಿ ಮೊದಲು ಅಬುದಾಬಿಗೆ ಆಗಮಿಸಿದ ಮೋದಿ, ಅಲ್ಲಿಂದ ಕತಾರ್ ಗೆ ತೆರಳಿ ದ್ವಿಪಕ್ಷೀಯ ಪಾಲುದಾರಿಕೆಯ ಪರಾಮರ್ಶೆ ನಡೆಸಿದರು. ಜತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆಯೂ ಮುಹಮ್ಮದ್ ಬಿನ್ ಝಾಯೆದ್ ಅವರ ಜತೆ ಚರ್ಚಿಸಿದರು. ಪಶ್ಚಿಮ ಏಷ್ಯಾದಲ್ಲಿ ಯುಎಇ ಭಾರತದ ಅತ್ಯಂತ ನಿಕಟ ಪ್ರಮುಖ ಪಾಲುದಾರ ದೇಶವಾಗಿದ್ದು, 2022ರಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಮೂಲಕ ವಹಿವಾಟು ಹೆಚ್ಚಿದೆ.
ಪ್ರಧಾನಿ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಸ್ವತಃ ಮುಹಮ್ಮದ್ ಬಿನ್ ಝಾಯೆದ್ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಆ ಬಳಿಕ ನಡೆದ ಸಭೆಯಲ್ಲಿ ಉಭಯ ದೇಶಗಳ ಗಣ್ಯರು ಎಂಟು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಇದರಲ್ಲಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಸೇರಿದೆ. ಇದು ಉಭಯ ದೇಶಗಳಲ್ಲಿ ಹೂಡಿಕೆಯ ಅವಕಾಶದ ಬಾಗಿಲು ತೆರೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಎಂಬಿಝೆಡ್ ಎಂದೇ ಖ್ಯಾತರಾಗಿರುವ ಝಾಯೆದ್ ಅವರನ್ನು ಸಹೋದರ ಎಂದು ಬಣ್ಣಿಸಿದ ಮೋದಿ, ತಮ್ಮದೇ ಊರಿಗೆ ಬಂದು ಕುಟಂಬ ಸದಸ್ಯರನ್ನು ಭೇಟಿ ಮಾಡಿದ ಅನುಭವವಾಗುತ್ತಿದೆ ಎಂದು ಹೇಳಿದರು. ಕಳೆದ ಏಳು ತಿಂಗಳಲ್ಲಿ ಐದು ಬಾರಿ ಉಭಯ ಮುಖಂಡರು ಪರಸ್ಪರ ಭೇಟಿಯಾಗಿದ್ದು, ಇದು ಮೋದಿ ಯುಎಇಗೆ ನೀಡುತ್ತಿರುವ ಏಳನೇ ಭೇಟಿಯಾಗಿದೆ.