Fact Check : ಸಂವಿಧಾನ; ನೆಹರು ಸಹಿ ಕುರಿತು ಸುಳ್ಳು ಹೇಳಿಕೆ ನೀಡಿದ ಪ್ರಜ್ಞಾ ಠಾಕೂರ್
ಹೊಸದಿಲ್ಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರನ್ನು ಕಡೆಗಣಿಸಿ ಭಾರತದ ಸಂವಿಧಾನಕ್ಕೆ ಸಹಿ ಹಾಕಿದ್ದ ಮೊದಲ ವ್ಯಕ್ತಿಯಾಗಿದ್ದರು ಮತ್ತು ರಾಷ್ಟ್ರಪತಿಗಳ ಸಹಿಗೆ ಜಾಗವನ್ನೇ ಬಿಟ್ಟಿರಲಿಲ್ಲ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದ್ದಾರೆ.
ಆಜ್ ತಕ್ ಸುದ್ದಿವಾಹಿನಿಯ ಯು ಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿತ ಸಂದರ್ಶನದಲ್ಲಿ ಠಾಕೂರ್, “ನೆಹರು ಸಂವಿಧಾನಕ್ಕೆ ಸಾಧ್ಯವಾದಷ್ಟು ಶೀಘ್ರ ಸಹಿ ಹಾಕಲು ಉತ್ಸುಕರಾಗಿದ್ದರು. ಸಂವಿಧಾನವು ಸಿದ್ಧಗೊಂಡಾಗ ಅದಕ್ಕೆ ಸಹಿ ಹಾಕಬೇಕಿತ್ತು ಮತ್ತು ಶಿಷ್ಟಾಚಾರದಂತೆ ರಾಷ್ಟ್ರಪತಿಗಳು ಮೊದಲು ಸಹಿ ಹಾಕಬೇಕಿತ್ತು. ಆದರೆ ಮೊದಲು ಸಹಿ ಹಾಕಿದ್ದ ನೆಹರು ಇತರರು ಸಹಿ ಹಾಕಲು ಜಾಗವನ್ನು ಬಿಟ್ಟಿರಲಿಲ್ಲ. ಬಳಿಕ ರಾಷ್ಟ್ರಪತಿಗಳು ಪಕ್ಕದಲ್ಲಿ ಸಹಿ ಮಾಡಬೇಕಾಗಿತ್ತು” ಎಂದು ಹೇಳಿದ್ದಾರೆ.
“ಎಲ್ಲಿ ಸಹಿ ಮಾಡಬೇಕು ಎಂಬ ತನ್ನ ಕರ್ತವ್ಯ ಗೊತ್ತಿರದ ವ್ಯಕ್ತಿ ರಾಷ್ಟ್ರಪತಿಗಳಿಗಿಂತ ಮೊದಲು ಸಹಿ ಮಾಡುತ್ತಾರೆ, ಆದರೆ ನಮ್ಮ ವಿನಮ್ರ ರಾಷ್ಟ್ರಪತಿಗಳು ನೆಹರು ಅವರ ಸಹಿಯ ಪಕ್ಕದಲ್ಲಿ, ಸ್ವಲ್ಪ ಕೆಳಭಾಗದಲ್ಲಿ ಸಹಿ ಹಾಕುತ್ತಾರೆ. ಇದು ನಮಗೆ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ”ಎಂದೂ ಠಾಕೂರ್ ಹೇಳಿದ್ದಾರೆ.
Photo : thequint.com
ಹೀಗೆ ನಿಜವಾಗಿಯೂ ನಡೆದಿತ್ತೇ?: ಇಲ್ಲ, ಠಾಕೂರ್ ಹೇಳಿಕೆ ನಿಜವಲ್ಲ. ಸಂವಿಧಾನದ ಮೇಲೆ ಸಹಿ ಹಾಕಿದ್ದ ಮೊದಲ ವ್ಯಕ್ತಿ ನೆಹರು ಆಗಿದ್ದರು ಎನ್ನುವುದು ನಿಜವಾಗಿದ್ದರೂ ಠಾಕೂರ್ ನಿರೂಪಣೆ ನಿಜವಲ್ಲ. ನೆಹರು ಅವರು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರನ್ನು ಕಡೆಗಣಿಸಿರಲಿಲ್ಲ.
ರಾಷ್ಟ್ರಪತಿಗಳು ತನಗಿಂತ ಮೊದಲು ಸಹಿ ಹಾಕುವಂತೆ ಸಂವಿಧಾನ ಸಭೆಯ ಎಲ್ಲ ಸದಸ್ಯರನ್ನು ಆಹ್ವಾನಿಸಿದ್ದರು. ನೆಹರು ಪ್ರಧಾನಿಯಾಗಿದ್ದರಿಂದ ಅವರು ಮೊದಲ ಆಹ್ವಾನಿತರಾಗಿದ್ದರು. ಸ್ಥಳಾವಕಾಶದ ಕೊರತೆಯಿಂದಾಗಿ ಪ್ರಸಾದ್ ಅವರು ದಾಖಲೆಯ ಬದಿಯಲ್ಲಿ ಸಹಿ ಮಾಡಬೇಕಾಗಿತ್ತು ಎಂಬ ಠಾಕೂರ್ ಅವರ ಹೇಳಿಕೆಯೂ ನಿಜವಲ್ಲ. ಭಾರತ ಸರಕಾರದ ವೆಬ್ ಸೈಟಿನಲ್ಲಿ ಲಭ್ಯವಿರುವ ಸಂವಿಧಾನದ ಮೂಲಪ್ರತಿಯಲ್ಲಿ ನೆಹರು ಮತ್ತು ಇತರ ಸದಸ್ಯರ ಸಹಿಗಳ ಮೇಲ್ಭಾಗದಲ್ಲಿ ರಾಷ್ಟ್ರಪತಿಗಳ ಸಹಿಯನ್ನು ಕಾಣಬಹುದು.
ನೆಹರು ಅವರು ರಾಷ್ಟ್ರಪತಿಗಳನ್ನು ಕಡೆಗಣಿಸಿ ಸಂವಿಧಾನಕ್ಕೆ ಮೊದಲು ಸಹಿ ಹಾಕಲು ನಿರ್ಧರಿಸಿದ್ದರು ಎಂಬ ಠಾಕೂರ್ ಹೇಳಿಕೆಯನ್ನು ಇತಿಹಾಸಕಾರ ಸಾಕಿಬ್ ಸಲೀಮ್ ಅವರೂ ತಿರಸ್ಕರಿಸಿದ್ದಾರೆ. ರಾಷ್ಟ್ರಪತಿಗಳ ಆಹ್ವಾನದ ಬಳಿಕವೇ ನೆಹರು ಅವರು ಸಂವಿಧಾನಕ್ಕೆ ಸಹಿ ಮಾಡಿದ್ದರು ಎನ್ನುವುದನ್ನು ಸಂವಿಧಾನ ಸಭೆಯ ದಾಖಲೆಗಳು ಸಾಬೀತುಗೊಳಿಸುತ್ತವೆ ಎಂದು ಅವರು ಹೇಳಿದ್ದಾರೆ.
ಕೃಪೆ: thequint.com