ತುರ್ತು ಪರಿಸ್ಥಿತಿ ಅಸಂವಿಧಾನಿಕ, ಇದು ದೇಶವನ್ನು ಅರಾಜಕತೆಗೆ ತಳ್ಳಿತು: ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2024-06-27 11:49 GMT

Photo: PTI

ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಸಂವಿಧಾನದ ಮೇಲೆ ನಡೆದ ಅತಿದೊಡ್ಡ ದಾಳಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಗುರುವಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ದೇಶದ ಇತಿಹಾಸದ ಕರಾಳ ಅಧ್ಯಾಯ ಎಂದು ಬಣ್ಣಿಸಿದರು.

ಚುನಾವಣೆ ಬಳಿಕ 18ನೇ ಲೋಕಸಭೆ ರಚನೆಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಅವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶ ಅರಾಜಕತೆಗೆ ತಳ್ಳಲ್ಪಟ್ಟಿತು. ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಪ್ರಯತ್ನವನ್ನು ಎಲ್ಲರೂ ಖಂಡಿಸಬೇಕು ಎಂದು ಕರೆ ನೀಡಿದರು.

"ತುರ್ತು ಪರಿಸ್ಥಿತಿ ದೇಶದ ಸಂವಿಧಾನದ ಮೇಲೆ ನಡೆದ ಅತಿದೊಡ್ಡ ದಾಳಿ ಮತ್ತು ಕರಾಳ ಅಧ್ಯಾಯ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶ ಅರಾಜಕತೆಗೆ ತಳ್ಳಲ್ಪಟ್ಟಿತ್ತು. ಆದರೆ ದೇಶ ಅಂಥ ಅಸಂವಿಧಾನಿಕ ಶಕ್ತಿಗಳ ವಿರುದ್ಧ ಜಯ ಸಾಧಿಸಿತು" ಎಂದು ಬಿಜೆಪಿ ಸದಸ್ಯರ ಹರ್ಷೋದ್ಗಾರ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಬಣ್ಣಿಸಿದರು.

"ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಪ್ರಯತ್ನವನ್ನು ಎಲ್ಲರೂ ಖಂಡಿಸಬೇಕು. ವಿಭಜಕ ಶಕ್ತಿಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸಿದವು. ದೇಶದ ಒಳಗೆ ಮತ್ತು ಹೊರಗೆ ಸಮಾಜದಲ್ಲಿ ಕಂದರ ಸೃಷ್ಟಿಸುವ ಪ್ರಯತ್ನ ಮಾಡಿದವು" ಎಂದು ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News