ಬಾಬರಿ ಮಸೀದಿ ಧ್ವಂಸ ವಿರೋಧಿಸಿದ್ದ ಅರ್ಚಕ ಬಾಬಾ ಲಾಲ್ ದಾಸ್

Update: 2024-01-22 18:13 GMT

ಹೊಸದಿಲ್ಲಿ: ಅಯೋಧ್ಯೆ ಮಾತ್ರವಲ್ಲ, ಭಾರತದಾದ್ಯಂತದ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಹಾಗೂ ಅವರ ಮನಸ್ಸನ್ನು ನೋಯಿಸಬಾರದು. ನಮ್ಮ ಧರ್ಮ ಇದಕ್ಕೆ ಅನುಮತಿ ನೀಡುವುದಿಲ್ಲ. ರಾಮನ ರಾಜಕೀಯ ಆದರ್ಶ ಎಲ್ಲರಿಗೂ ಪ್ರೇರಣೆಯಾಗಿದೆ. ನಾವು ತಿನ್ನುವಾಗ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ. ಆದುದರಿಂದ ಎಲ್ಲಾ ಜನರು ನಮ್ಮವರೇ. ಯಾರೂ ದೊಡ್ಡವರಲ್ಲ, ಸಣ್ಣವರಲ್ಲ.

1990ರ ದಶಕದಲ್ಲಿ ವಿವಾದಾತ್ಮಕ ರಾಮಜನ್ಮಭೂಮಿ ಮಂದಿರದ ಮಹಾಂತರಾಗಿದ್ದ ಅರ್ಚಕ ಬಾಬಾ ಲಾಲ್ ದಾಸ್ ಅವರ ಮಾತುಗಳು ಇವು. 1991ರಲ್ಲಿ ಆನಂದ್ ಪಟವರ್ಧನ್ ಅವರು ನಿರ್ದೇಶಿಸಿದ ‘ರಾಮ್ ಕೆ ನಾಮ್’ ಸಾಕ್ಷ್ಯಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಸಾಕ್ಷ್ಯಚಿತ್ರ ನಿರ್ಮಾಣವಾದ ಬಳಿಕ 1993 ನವೆಂಬರ್ 26ರಂದು ಬಾಬಾ ಲಾಲ್ ದಾಸ್ ಅವರನ್ನು ಸಂದೇಹಾಸ್ಪದ ರೀತಿಯಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.

ಲಕ್ನೋ ಉಚ್ಚ ನ್ಯಾಯಾಲಯ 1993ರಲ್ಲಿ ಬಾಬಾ ಲಾಲ್ ದಾಸ್ ಅವರನ್ನು ಅಯೋಧ್ಯೆಯ ಮುಖ್ಯ ಅರ್ಚರನ್ನಾಗಿ ನೇಮಕ ಮಾಡಿತ್ತು. ಬಾಬ್ರಿ ಮಸೀದಿಯನ್ನು ಸುತ್ತುವರಿದ ಸಂದರ್ಭ ವಿಶ್ವಹಿಂದೂ ಪರಿಷತ್ ನಡೆಸಿದ ಚಟುವಟಿಕೆಗಳನ್ನು ಅವರು ಕಟುವಾಗಿ ಟೀಕಿಸಿದ್ದರು. ರಥಯಾತ್ರೆಯನ್ನು ನಿಲ್ಲಿಸುವಂತೆ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಅವರು ಹೇಳಿದ್ದರು.

‘‘ಇದು (ಮಸೀದಿ ಧ್ವಂಸ) ವಿಎಚ್ಪಿಯ ರಾಜಕೀಯ ಆಟವಾಗಿದೆ. ಇದನ್ನು ಮಾಡಲು ಬಯಸಿದವರು ವಾಸ್ತವವಾಗಿ ಹಿಂದೂ ಮತಗಳನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆ ಸೃಷ್ಟಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ’’ ಎಂದು ಅವರು ಸಾಕ್ಷ್ಯ ಚಿತ್ರದಲ್ಲಿ ಹೇಳಿದ್ದಾರೆ.

ಅವರು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವಿನ ಶಾಂತಿ ಹಾಗೂ ಸಾಮರಸ್ಯದ ಹಲವು ನಿದರ್ಶನಗಳನ್ನು ತಿಳಿಸಿದ್ದಾರೆ. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್ ನ ಮುಸ್ಲಿಂ ಆಡಳಿತಾಗಾರರ ನೆರವಿನಿಂದ ಹೇಗೆ ನಿರ್ಮಿಸಲಾಯಿತು ಹಾಗೂ 1985ರ ಘರ್ಷಣೆಯ ಬಳಿಕ ಹಿಂದೂ ಪುರೋಹಿತರು ಹಾಗೂ ಮುಸ್ಲಿಂ ಪೀರ್ಗಳು ಸೌಹಾರ್ದಯುತವಾಗಿ ಬದುಕಲು ಹೇಗೆ ನಿರ್ದರಿಸಿದರು ಎಂಬುದನ್ನು ಅವರು ನಿರೂಪಿಸಿದ್ದಾರೆ.

ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವ ಪಿತೂರಿಗೆ ಸಂಬಂಧಿಸಿ ಅವರು ಉತ್ತಮ ಸಾಕ್ಷ್ಯವನ್ನು ಹೊಂದಿದ್ದರು. ಅಲ್ಲದೆ, 1993ರಲ್ಲಿ ಮಸೀದಿ ಧ್ವಂಸದ ತನಿಖೆಗೆ ರೂಪಿಸಲಾದ ದಿಲ್ಲಿಯ ನಾಗರಿಕ ನ್ಯಾಯ ಮಂಡಳಿಗೆ ಈ ಸಾಕ್ಷ್ಯಗಳನ್ನು ಸಲ್ಲಿಸಿದ್ದರು. ರಾಮಜನ್ಮಭೂಮಿ ನ್ಯಾಸದ ಹೆಸರಿನನಲ್ಲಿ ಸಂಗ್ರಹಿಸಲಾದ ದೊಡ್ಡ ಮೊತ್ತವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿರುವುದಾಗಿ ವಕೀಲರಾದ ಫಲ್ವಿಯಾ ಆ್ಯಗ್ನೆಸ್ ಬರೆದ ಪತ್ರಿಕೆಯ ಲೇಖನವೊಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News