ದಿಲ್ಲಿ ವಿವಿ ಕಾಲೇಜಿನ ತರಗತಿಯ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡಿದ ಪ್ರಾಂಶುಪಾಲೆ!

Photo | hindustantimes
ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಶಾಖವನ್ನು ತಡೆಯಲು ತರಗತಿ ಕೊಠಡಿಯ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತರಗತಿಯ ಗೋಡೆಗಳಿಗೆ ಹಸುವಿನ ಸೆಗಣಿ ಹಚ್ಚುವ ವಿಡಿಯೋವನ್ನು ಸ್ವತಃ ಪ್ರಾಂಶುಪಾಲರಾದ ಪ್ರತ್ಯುಷ್ ವತ್ಸಲಾ ಪ್ರಾಧ್ಯಾಪಕರ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ ಪ್ರತ್ಯುಷ್ ವತ್ಸಲಾ ಸಿಬ್ಬಂದಿಯ ಸಹಾಯದಿಂದ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡುತ್ತಿರುವುದು ಕಂಡು ಬಂದಿದೆ. ಇದಲ್ಲದೆ ʼ ಸಿ ಬ್ಲಾಕ್ನಲ್ಲಿ ತರಗತಿ ಕೊಠಡಿಯನ್ನು ತಂಪಾಗಿಸಲು ಸ್ಥಳೀಯ ವಿಧಾನಗಳನ್ನು ಬಳಸಲಾಗುತ್ತಿದೆʼ ಎಂದು ಪ್ರಾಂಶುಪಾಲರು ಹೇಳುತ್ತಿರುವುದು ಕಂಡು ಬಂದಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪ್ರಾಂಶುಪಾಲರಾದ ಪ್ರತ್ಯೂಷ್ ವತ್ಸಲಾ ಈ ಕುರಿತು ಪ್ರತಿಕ್ರಿಯಿಸಿ, ಸಂಶೋಧನೆಯ ಭಾಗವಾಗಿ ಗೋಡೆಗಳಿಗೆ ಹಸುವಿನ ಸೆಗಣಿ ಲೇಪನ ಮಾಡಲಾಗಿದೆ. ಇದು ಪ್ರಕ್ರಿಯೆಯಲ್ಲಿದೆ. ಒಂದು ವಾರದ ನಂತರ ನಾನು ಸಂಪೂರ್ಣ ಸಂಶೋಧನೆಯ ವಿವರಗಳನ್ನು ಹಂಚಿಕೊಳ್ಳಬಹುದು. ನೈಸರ್ಗಿಕ ಮಣ್ಣನ್ನು ಸ್ಪರ್ಶಿಸುವುದರಿಂದ ಯಾವುದೇ ಹಾನಿಯಾಗದ ಕಾರಣ ನಾನೇ ಒಂದು ಗೋಡೆಗೆ ಸೆಗಣಿ ಲೇಪಿಸಿದ್ದೇನೆ. ಕೆಲವರು ಸಂಪೂರ್ಣ ವಿವರಗಳನ್ನು ತಿಳಿಯದೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.
ಈ ಕುರಿತು UPSC ಆಕಾಂಕ್ಷಿಗಳಿಗೆ ತರಬೇತುದಾರರಾಗಿರುವ ಪ್ರೊಫೆಸರ್ ವಿಜೇಂದರ್ ಚೌಹಾಣ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ತರಗತಿಯ ಗೋಡೆಗಳ ಮೇಲೆ ಹಸುವಿನ ಸಗಣಿಯನ್ನು ಲೇಪಿಸಲು ಉತ್ತೇಜಿಸುವ ಕಾಲೇಜಿನ ವಿದ್ಯಾರ್ಥಿಗಳ ನೇಮಕಾತಿ ಅವಕಾಶವನ್ನು ಪ್ರಶ್ನಿಸಿದ್ದಾರೆ. ʼಒಂದು ವೇಳೆ ನೀವು ಉದ್ಯೋಗದಾತರಾಗಿದ್ದರೆ ಮತ್ತು ಅಂತಹ ಪ್ರಾಧ್ಯಾಪಕರಿರುವ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅರ್ಜಿದಾರರನ್ನು ನೇಮಿಸಿಕೊಳ್ಳುತ್ತೀರಾʼ ಎಂದು ಪ್ರಶ್ನಿಸಿದ್ದಾರೆ.
ಮತ್ತೋರ್ವ ಎಕ್ಸ್ ಬಳಕೆದಾರರು ʼವಿಶ್ವವಿದ್ಯಾನಿಲಯದ ಎಲ್ ಬಿ ಕಾಲೇಜಿನ ಪ್ರಾಂಶುಪಾಲರು ಮೊದಲು ಕಾಲೇಜಿನೊಳಗೆ ಹಸುವನ್ನು ಕಟ್ಟಿ ಹಾಕಿದರು. ಸೆಗಣಿಯನ್ನು ಬಳಸಿಕೊಂಡು ಕಾಲೇಜಿನ ಗೋಡೆಗಳಿಗೆ ಸುಣ್ಣ ಬಳಿಯುವ ಕೆಲಸವೂ ಆರಂಭವಾಗಿದೆ. ಕಾಲೇಜುಗಳಲ್ಲಿ ಗೋಮೂತ್ರ ಕುಡಿಯುವುದನ್ನು ಕಡ್ಡಾಯಗೊಳಿಸಿದರೆ ದೇಶ ವಿಶ್ವಗುರುವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.