ನಿಲ್ಲದ ಹಿಂಸಾಚಾರ, ಇಂಟರ್ನೆಟ್ ಕಡಿತ, ಕರ್ಫ್ಯೂ | ಮಣಿಪುರದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ : ಶಿಕ್ಷಣ ತಜ್ಞರ ಕಳವಳ

Update: 2024-12-08 11:45 GMT

PC : PTI 

ಇಂಫಾಲ : ಮಣಿಪುರದಲ್ಲಿ ಪದೇ ಪದೇ ಇಂಟರ್ನೆಟ್ ಕಡಿತ,ಕರ್ಫ್ಯೂಗಳು ಮತ್ತು ಸಾರ್ವತ್ರಿಕ ಮುಷ್ಕರಗಳೊಂದಿಗೆ ನಿಲ್ಲದ ಹಿಂಸಾಚಾರವು ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ ಎಂದು ಹಲವಾರು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಇಂಟರ್ನೆಟ್ ಸ್ಥಗಿತಗೊಳ್ಳುತ್ತಿರುವುದರಿಂದ ಆನ್‌ಲೈನ್ ಸಂಪನ್ಮೂಲಗಳಿಗೆ ಪ್ರವೇಶ ಪಡೆಯುವುದರಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕರ್ಫ್ಯೂಗಳು ಮತ್ತು ಸಾರ್ವತ್ರಿಕ ಮುಷ್ಕರಗಳಿಂದಾಗಿ ಪ್ಲೇಸ್‌ಮೆಂಟ್‌ಗಳಿಗಾಗಿ ಮಣಿಪುರದಲ್ಲಿಯ ಕ್ಯಾಂಪಸ್‌ಗಳಿಗೆ ಭೇಟಿ ನೀಡಲು ಹಲವಾರು ಕಂಪೆನಿಗಳು ಹಿಂದೇಟು ಹಾಕುತ್ತಿವೆ ಎಂದು ಅವರು ಹೇಳಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎನ್‌ಐಟಿ-ಮಣಿಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಹಾಗೂ ಪ್ಲೇಸ್‌ಮೆಂಟ್ ಉಸ್ತುವಾರಿ ಕೆ.ಎಚ್.ಜಾನ್ಸನ್ ಸಿಂಗ್ ಅವರು,‘ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಕ್ಯಾಂಪಸ್ ನೇಮಕಾತಿಗಳಲ್ಲಿ ಇಳಿಕೆಯಾಗಿದೆ. ಈ ವರ್ಷ ಕನಿಷ್ಠ 40 ಕಂಪೆನಿಗಳು ಆನ್‌ಲೈನ್‌ನಲ್ಲಿ ಪ್ಲೇಸ್‌ಮೆಂಟ್ ಅಭಿಯಾನ ನಡೆಸಿದ್ದು,70 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದು ಹಿಂಸಾಚಾರ ಭುಗಿಲೇಳುವ ಮೊದಲಿನ ನಿಯೋಜನೆಗಳಿಗಿಂತ ತುಂಬ ಕಡಿಮೆಯಾಗಿದೆ. ಸುಮಾರು 50 ಕಂಪೆನಿಗಳು ಮತ್ತು ಸುಮಾರು 100 ವಿದ್ಯಾರ್ಥಿಗಳ ಆಯ್ಕೆಯನ್ನು ನಾವು ನಿರೀಕ್ಷಿಸಿದ್ದೆವು’ ಎಂದು ತಿಳಿಸಿದರು.

‘ಆಫ್‌ಲೈನ್‌ನಲ್ಲಿ ಸಂದರ್ಶನಗಳಿಗೆ ಆದ್ಯತೆ ನೀಡುವ ಕಂಪೆನಿಗಳು ಕ್ಯಾಂಪಸ್ ಸಂದರ್ಶನಗಳಿಗಾಗಿ ಭೇಟಿ ನೀಡಲು ಹಿಂಜರಿಯುತ್ತಿವೆ. ಎನ್‌ಐಟಿ ಕ್ಯಾಂಪಸ್ ಸುರಕ್ಷಿತವಾಗಿದೆ ಮತ್ತು ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷಗಳ ಮಾರ್ಗವನ್ನು ಹೊಂದಿದೆ ಎಂಬ ನಮ್ಮ ನಿರಂತರ ಭರವಸೆಗಳ ಹೊರತಾಗಿಯೂ ರಸ್ತೆಗಳಲ್ಲಿ ಟೈರ್‌ಗಳನ್ನು ಸುಡುವ,ಗುಂಪು ಹಿಂಸಾಚಾರದ ಮತ್ತು ಹೊರವಲಯದ ಪ್ರದೇಶಗಳಲ್ಲಿ ಗುಂಡಿನ ಚಕಮಕಿಗಳ ಮಾಧ್ಯಮಗಳಲ್ಲಿಯ ಚಿತ್ರಗಳು ಕಂಪೆನಿಗಳ ಹಿಂಜರಿಕೆಗೆ ಕಾರಣವಾಗಿರುವಂತಿದೆ ’ ಎಂದ ಅವರು,‘ಶೇ.80ರಷ್ಟು ನಮ್ಮ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿಯ ಹಾಸ್ಟೆಲ್‌ಗಳಲ್ಲಿ ವಾಸವಾಗಿದ್ದಾರೆ ಮತ್ತು ದಿನದ 24 ಗಂಟೆಗಳ ಕಾಲವೂ ಬ್ರಾಡ್‌ಬ್ಯಾಂಡ್ ಸೌಲಭ್ಯ ಹೊಂದಿದ್ದಾರೆ ’ಎಂದರು.

‘ಪ್ರತಿ ವಿಭಾಗದಲ್ಲಿಯ ನಮ್ಮ ವಿದ್ಯಾರ್ಥಿಗಳು ಮೊಬೈಲ್ ಇಂಟರ್ನೆಟ್ ಡೇಟಾ ಅವಲಂಬಿಸಿರುವುದರಿಂದ ಹೆಚ್ಚಿನವರು ಆನ್‌ಲೈನ್ ಸಂಪನ್ಮೂಲಗಳಿಗೆ ಸೀಮಿತ ಪ್ರವೇಶವನ್ನು ಹೊಂದಿದ್ದಾರೆ. ಕರ್ಫ್ಯೂಗಳು ಮತ್ತು ಸಾರ್ವತ್ರಿಕ ಮುಷ್ಕರಗಳು ತರಗತಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿವೆ. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್‌ಗಳನ್ನು ಹೊಂದಿಲ್ಲವಾದ್ದರಿಂದ ಅವರಿಗೆ ನೀಡಲಾದ ಅಸೈನ್‌ಮೆಂಟ್‌ಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ’ ಎಂದು ಮಣಿಪುರ ವಿವಿಯ ಸಮೂಹ ಸಂವಹನ ವಿಭಾಗದ ಸಹಾಯಕ ಪ್ರೊಫೆಸರ್ ನತಾಷಾ ಇಲಂಗಬಾಮ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇಂಟರ್ನೆಟ್ ಕಡಿತಗಳು ವೃತ್ತಿ ಸಮಾಲೋಚನೆ ಏಜೆನ್ಸಿಗಳ ಮೇಲೂ ತೀವ್ರ ಪರಿಣಾಮವನ್ನು ಬೀರಿದೆ. ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲು ಅನೇಕ ಸಮಾಲೋಚಕರಿಗೆ ಸಾದ್ಯವಾಗುತ್ತಿಲ್ಲ.

ರಾಷ್ಟ್ರೀಯ ಕಂಪೆನಿಗಳಿಗೆ ವಿದ್ಯಾರ್ಥಿಗಳ ರೆಸ್ಯೂಮ್‌ಗಳನ್ನು ಸಲ್ಲಿಸಲು ಅಡ್ಡಿಯಾಗಿದೆ ಎಂದು ಸಮಾಲೋಚಕರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News