Fact Check: ಪಂಜಾಬ್‌ನಲ್ಲಿ ಯುವತಿಯೊಬ್ಬಳ ಹತ್ಯೆಯನ್ನು ರಾಜಸ್ಥಾನದ ಘಟನೆ ಎಂದು ಸುಳ್ಳು ಕೋಮುಕೋನದೊಂದಿಗೆ ವೈರಲ್

Update: 2025-01-27 19:37 IST
Editor : Ismail | Byline : newsmeter.in
Fact Check

PC : newsmeter.in

  • whatsapp icon

Claim: ರಾಜಸ್ಥಾನದಲ್ಲಿ ನೀಲಂ, ಮೊಹಮ್ಮದ್ ಹಮೀದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಈಗ ಶವವಾಗಿ ಪತ್ತೆಯಾಗಿದ್ದಾಳೆ.

Fact: ಈ ಘಟನೆ ನಡೆದಿರುವುದು ಪಂಜಾಬ್ ನಲ್ಲಿ. ಕೊಲೆಗೆ ಸಂಬಂಧಿಸಿದಂತೆ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಇದರಲ್ಲಿ ಯಾವುದೇ ಕೋಮು ಕೋನವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಮೃತದೇಹದ ಫೋಟೋದೊಂದಿಗೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಕೆಲವರು ಈ ಹುಡುಗಿಯ ಹೆಸರು ನೀಲಂ, ಅವಳು ಮೊಹಮ್ಮದ್ ಹಮೀದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಈಗ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಜನವರಿ 25, 2025 ರಂದು ಹಂಚಿಕೊಂಡು, ‘‘ನೀಲಂ, ಅಪ್ಪ ಅಮ್ಮನ ಮಾತು ಕೇಳದೆ, ಅವರ ಮಾತುಗಳನ್ನು ವಿರೋಧಿಸಿ "ಮಹಮ್ಮದ್ ಹಮೀದ್" ನನ್ನು ಮದುವೆಯಾಗಿ ಹೋದ 6 ತಿಂಗಳಲ್ಲಿ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನನ್ನ ಅಬ್ದುಲ್ಲ ತುಂಬಾ ಒಳ್ಳೆಯವನು ಎಲ್ಲರಿಗಿಂತ ಭಿನ್ನ ಎಂದು ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಳಿಯಾಗಿ ಈ ರೀತಿ ಆದಗಾಲೇ ಗೊತ್ತಾಗುವುದು ಎಲ್ಲಾ ಅಬ್ದುಲ್ಲಗಳು ಒಂದೇ ಎಂದು...’’ ಎಂದು ಬರೆದುಕೊಂಡಿದ್ದಾರೆ.

                                            PC : newsmeter.in

 ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಇಲ್ಲಿ, ಇಲ್ಲಿ ನೋಡಬಹುದು. ಕೆಲವು ಪೋಸ್ಟ್​ನಲ್ಲಿ ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ ಅಲ್ಲ, ಪಂಜಾಬ್‌ನಲ್ಲಿ. ಹಾಗೆಯೆ ಇಲ್ಲಿ ಏರ್ ಹೋಸ್ಟೆಸ್ ಕೋರ್ಸ್ ಮಾಡುತ್ತಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೊಲೆ ಆರೋಪದ ಮೇಲೆ ಕಾನ್ ಸ್ಟೇಬಲ್ ಯುವರಾಜ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಹಲವಾರು ಸುದ್ದಿ ವರದಿಗಳು ನಮಗೆ ಕಂಡುಬಂತು. Enews punjab ವೈರಲ್ ಪೋಸ್ಟ್‌ನಲ್ಲಿರುವ ಅದೇ ಚಿತ್ರದ ಮತ್ತೊಂದು ಆ್ಯಂಗಲ್ ಅನ್ನು ಒಳಗೊಂಡು ಜನವರಿ 23, 2025 ರಂದು ‘ಪಂಜಾಬ್ ಪೋಲೀಸ್ ತನ್ನ ಗೆಳತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಕಾಲುವೆಗೆ ಎಸೆದಿದ್ದಾನೆ, ಮೃತರು ಚಂಡೀಗಢದಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದರು’ ಎಂಬ ಹೆಡ್​ಲೈನ್​ನೊಂದಿಗೆ ಸುದ್ದಿ ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ಪಂಜಾಬ್ ಚಂಡೀಗಢದಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದ ಹಿಮಾಚಲ ಪ್ರದೇಶದ 22 ವರ್ಷದ ಯುವತಿಯನ್ನು ಕೊಲೆ ಮಾಡಲಾಗಿದೆ. ಪಟಿಯಾಲದ ಭಾಕ್ರಾ ಕಾಲುವೆಯಲ್ಲಿ ಅವರ ಶವ ಬಿದ್ದಿರುವುದು ಪತ್ತೆಯಾಗಿದೆ. ಹುಡುಗಿಯ ಗೆಳೆಯ ಆಕೆಯ ಕೊಲೆ ಆರೋಪಿ. ಅವರು ವೃತ್ತಿಯಲ್ಲಿ ಪೊಲೀಸ್ ಆಗಿದ್ದು ಈಗಾಗಲೇ ಮದುವೆಯಾಗಿದೆ. ಮಗುವಿನ ತಂದೆಯೂ ಹೌದು. ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿ 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿ ಯುವರಾಜ್ ಸಿಂಗ್ (34) ಅವರನ್ನು ಬಂಧಿಸಿದ್ದಾರೆ. ಅವರು ಫತೇಘರ್ ಸಾಹಿಬ್ ನಿವಾಸಿ. ಸುಮಾರು 5 ತಿಂಗಳ ಹಿಂದೆ ಯುವರಾಜ್ ಅವರನ್ನು ಭೇಟಿಯಾಗಿದ್ದಳು. ಯುವರಾಜ್ ತನ್ನನ್ನು 28 ವರ್ಷ ಅವಿವಾಹಿತ ಎಂದು ಬಣ್ಣಿಸಿದ್ದರು ಎಂದು ಮೃತ ಸಹೋದರಿ ಪೊಲೀಸರಿಗೆ ಹೇಳಿದ್ದಾರೆ.

                                 PC: newsmeter.in

 23 ಜನವರಿ 2025 ರಂದು ನ್ಯೂಸ್18 ಪಂಜಾಬ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಡಿಎಸ್‌ಪಿ ರಾಜ್‌ಪಾಲ್ ಸಿಂಗ್ ಗಿಲ್ ಅವರ ಸಂದರ್ಶನವನ್ನು ಒಳಗೊಂಡ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ‘‘2025 ರ ಜನವರಿ 20 ರಂದು ನಿಶಾ ಸೋನಿ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ, ನಂತರ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಲು ನಿಶಾ ಹೋಗಿದ್ದಳು ಎಂದು ಸಹೋದರಿ ಹೇಳಿಕೊಂಡಿದ್ದಾಳೆ, ಆದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಫೋನ್ ಆಫ್ ಆಗಿತ್ತು. ಯುವರಾಜ್ ತನ್ನ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ನಿಶಾಗೆ ಬೆದರಿಕೆ ಹಾಕುತ್ತಿದ್ದ ಎಂದು ಸಹೋದರಿ ಉಲ್ಲೇಖಿಸಿದ್ದಾರೆ ಎಂದು ಡಿಎಸ್ಪಿ ತಿಳಿಸಿದ್ದಾರೆ. 20 ಜನವರಿ 2025 ರಂದು, ಯುವರಾಜ್ ನಿಶಾಳನ್ನು ಭಾಕ್ರಾ ಕಾಲುವೆಯ ಸೇತುವೆಯೊಂದಕ್ಕೆ ಕರೆದೊಯ್ದು ನೀರಿಗೆ ತಳ್ಳಿದ್ದಾನೆ. ಆಕೆಯ ಶವವನ್ನು ಜನವರಿ 22 ರಂದು ಪಾಸಿಯಾನಾ ಸೇತುವೆಯ ಬಳಿ ಸಿಕ್ಕಿದೆ. ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ’’ ಎಂದು ಪೊಲೀಸರು ಹೇಳಿರುವುದು ಇದೆ.

Full View

ಇನ್ನು ದಿವ್ಯಾ ಹಿಮಾಚಲ ಕೂಡ ಜನವರು 23 ರಂದು, ವೈರಲ್ ಪೋಸ್ಟ್​ನಲ್ಲಿರುವ ಮೃತ ಹುಡುಗಿಯ ಚಿತ್ರವನ್ನು ಹಂಚಿಕೊಂಡು ಸುದ್ದಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಸುದ್ದಿ ಪ್ರಕಾರ, ಹುಡುಗಿಯ ಹೆಸರು ನಿಶಾ ಸೋನಿ ಮತ್ತು ಅವಳು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜೋಗಿಂದರ್‌ನಗರದ ನಿವಾಸಿ. ಕಳೆದ ಮೂರು ವರ್ಷಗಳಿಂದ ನಿಶಾ ಚಂಡೀಗಢದಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಪಟಿಯಾಲ ಬಳಿಯ ಭಾಕ್ರಾ ಕಾಲುವೆಯಿಂದ ಅವರ ಮೃತದೇಹ ಪತ್ತೆಯಾಗಿದೆ.

ಜನವರಿ 23 ರಂದು ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಕೂಡ ಆರೋಪಿಯ ಹೆಸರನ್ನು ಯುವರಾಜ್ ಎಂದು ನಮೂದಿಸಲಾಗಿದೆ.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಂಜಾಬ್‌ನ ಪೊಲೀಸರು ಏರ್ ಹೊಸ್ಟೆಸ್ ಕೋರ್ಸ್ ಮಾಡುತ್ತಿರುವ ಹುಡುಗಿಯ ಕೊಲೆಗೆ ಸಂಬಂಧಿಸಿದಂತೆ ಯುವರಾಜ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ನಿಶಾ ಶವ ಭಾಕ್ರಾ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ವಿಷಯಕ್ಕೂ ರಾಜಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಅಥವಾ ಇದರಲ್ಲಿ ಯಾವುದೇ ಕೋಮು ಕೋನವಿಲ್ಲ.

 

 ಈ ಲೇಖನವನ್ನು ಮೊದಲು newsmeter.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - newsmeter.in

contributor

Similar News