ಪಂಜಾಬ್: ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ; ಕಾಂಗ್ರೆಸ್ ನಾಯಕ ಬಂಧನ

Update: 2023-10-17 16:57 GMT

 Photo Credit: PTI

ಚಂಡೀಗಢ: ಪಂಜಾಬ್‌ನಲ್ಲಿ ಸರಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ಕುಲ್ಬೀರ್ ಸಿಂಗ್ ಝಿರ ಎಂಬವರನ್ನು ಫಿರೋಝ್‌ಪುರ ಜಿಲ್ಲೆಯಲ್ಲಿರುವ ಅವರ ಮನೆಯಿಂದ ಮಂಗಳವಾರ ಬಂಧಿಸಲಾಗಿದೆ.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಮುಖ್ಯಸ್ಥರಾಗಿರುವ ಝಿರ ಅವರನ್ನು ಉಪ ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ಅವರನ್ನು ಅ.31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಬಂಧಿತ ಕಾಂಗ್ರೆಸ್ ನಾಯಕನ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸದರ್ ಪೊಲೀಸ್ ಠಾಣೆಯ ಹೊರಗಡೆ ಜಮಾಯಿಸಿ ರಾಜ್ಯದ ಆಮ್ ಆದ್ಮಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಝಿರ ನೂರಕ್ಕೂ ಅಧಿಕ ಗ್ರಾಮಗಳ ಸರಪಂಚರೊಂದಿಗೆ ಬ್ಲಾಕ್ ಡೆವೆಲಪ್‌ಮೆಂಟ್ ಪ್ರೋಗ್ರಾಮ್ ಆಫಿಸರ್ ಸುರ್ಜಿತ್ ಸಿಂಗ್‌ರ ಕಚೇರಿಯ ಒಳಗೆ ಅ. 10ರಿಂದ 13ರವರೆಗೆ ಧರಣಿ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ. ಪಂಚಾಯತ್‌ಗಳಿಗೆ ಅನುದಾನಗಳನ್ನು ನೀಡುವಲ್ಲಿ ಸುರ್ಜಿತ್ ಸಿಂಗ್ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದಾಗಿ ಸರಪಂಚರು ಆರೋಪಿಸಿದ್ದಾರೆ. ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಈ ಅಧಿಕಾರಿಯು ತಾರತಮ್ಯವನ್ನೂ ನಡೆಸುತ್ತಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ಧರಣಿ ನಿರತರು ಸಿಂಗ್‌ರ ಕಚೇರಿಯಲ್ಲೇ ಮಲಗಿದ್ದರು. ಆದರೆ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈ ಅಧಿಕಾರಿ ಕಚೇರಿಗೆ ಬಂದಿರಲಿಲ್ಲ.ಆ ಬಳಿಕ, ಪೊಲೀಸರು ಅಧಿಕಾರಿ ಸಿಂಗ್ ನೀಡಿದ ದೂರಿನ ಆಧಾರದಲ್ಲಿ ಝಿರ ಮತ್ತು 80 ಅಪರಿಚಿತ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಝಿರ 2017ರಿಂದ 2022ರವರೆಗೆ ಝಿರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News