ಅರ್ಷದೀಪ್ ಸಿಂಗ್ ಗೆ ಜನಾಂಗೀಯ ನಿಂದನೆ ಆರೋಪ: ಕ್ಷಮೆಯಾಚಿಸಿದ ಕಮ್ರಾನ್ ಅಕ್ಮಲ್

Update: 2024-06-11 03:43 GMT

ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ವಿರುದ್ಧ ನೀಡಿದ್ದ ವಿವಾದಾತ್ಮಕ ಜನಾಂಗೀಯ ನಿಂದನೆ ಹೇಳಿಕೆಗೆ ಪಾಕಿಸ್ತಾನದ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಪಾಕ್ ಕ್ರಿಕೆಟಿಗನ ಹೇಳಿಕೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಎಆರ್ ವೈ ನ್ಯೂಸ್ ನ ಚರ್ಚಾಕೂಟವೊಂದರ್ಲಿ ಅಕ್ಮಲ್ ಈ ಹೇಳಿಕೆ ನೀಡಿದ್ದು, ಇದು ಅಸಮರ್ಪಕ ಮತ್ತು ಅಗೌರವ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಮಂದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯದ ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಅರ್ಷದೀಪ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗೆ ತಕ್ಷಣ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. "ಕುಚ್ ಭೀ ಹೋ ಸಕ್ತಾ ಹೈ.. 12 ಬಜ್ ಗಯೇ ಹೈ (ಏನು ಬೇಕಾದರೂ ಸಂಭವಿಸಬಹುದು. ಈಗಾಗಲೇ 12 ರನ್ಗಳಾಗಿವೆ) ಎಂದು ಅಕ್ಮಲ್ ಹೇಳುವ ವಿಡಿಯೊವನ್ನು ಹರ್ಭಜನ್ ಮರು ಪೋಸ್ಟ್ ಮಾಡಿದ್ದಾರೆ. ಇದು ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ಹೇಳಿಕೆ ಎಂದು ಪರಿಗಣಿಸಲಾಗಿತ್ತು.

ಇದಕ್ಕೆ ಅಕ್ಮಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸಿದ್ದಾರೆ. "ಇತ್ತೀಚಿನ ನನ್ನ ಹೇಳಿಕೆಗೆ ಹರ್ಭಜನ್ ಸಿಂಗ್ ಮತ್ತು ಸಿಕ್ಖ್ ಸಮುದಾಯದ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಮಾತುಗಳು ಅಗೌರವ ಮತ್ತು ಅಸಮರ್ಪಕ. ವಿಶ್ವಾದ್ಯಂತ ಇರುವ ಸಿಕ್ಖ್ ಸಮುದಾಯದ ಮೇಲೆ ನನಗೆ ಅಪಾರ ಗೌರವ ಇದೆ. ಯಾರನ್ನೂ ನೋಯಿಸುವ ಉದ್ದೇಶ ನನಗೆ ಇರಲಿಲ್ಲ. ನಿಜವಾಗಿಯೂ ಕ್ಷಮೆ ಯಾಚಿಸುತ್ತೇನೆ" ಎಂದು ಅಕ್ಮಲ್ ಪೋಸ್ಟ್ ಮಾಡಿದ್ದಾರೆ.

"ಲಖ್ ದೀ ಲಾನತ್ ತೇರೇ ಕಮ್ರಾನ್ ಅಕ್ಮಲ್... ನೀವು ಸಡಿಲ ಮಾತುಗಳನ್ನು ಆಡುವ ಮುನ್ನ ಸಿಕ್ಖ್ ಇತಿಹಾಸವನ್ನು ತಿಳಿದುಕೊಳ್ಳಿ. ನಿಮ್ಮ ತಾಯಂದಿರು ಹಾಗೂ ಸಹೋದರಿಯರನ್ನು ದಾಳಿಕೋರರು ಅಪಹರಿಸಿದಾಗ ಮಧ್ಯರಾತ್ರಿಯಲ್ಲಿ ರಕ್ಷಿಸಿದವರು ನಾವು. ನಿಮಗೆ ನಾಚಿಕೆಯಾಗಬೇಕು. ಕೃತಜ್ಞತೆ ಇರಲಿ" ಎಂದು ಹರ್ಭಜನ್ ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News