ರೈಲ್ವೆಯನ್ನು ಸುರಕ್ಷಿತವಾಗಿರಿಸುವ ಟ್ರ್ಯಾಕ್‌ಮೆನ್‌ಗಳಿಗೆ ಭಡ್ತಿಯೇ ಇಲ್ಲ : ರಾಹುಲ್ ಗಾಂಧಿ

Update: 2024-09-03 15:29 GMT

ರಾಹುಲ್ ಗಾಂಧಿ | PC: X\ @RahulGandhi 

ಹೊಸದಿಲ್ಲಿ : ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಹೆಲ್ಮೆಟ್ ಹಾಕಿ ಸುತ್ತಿಗೆ, ಸ್ಪಾನರ್ ಹಿಡಿದು ಟ್ರ್ಯಾಕ್‌ ಮೆನ್ ಗಳ ಜೊತೆ ದಿಲ್ಲಿಯ ಕಂಟೋನ್‌ಮೆಂಟ್‌ ನಿಲ್ದಾಣದ ರೈಲ್ವೇ ಹಳಿಯಲ್ಲಿ ಹೆಜ್ಜೆ ಹಾಕಿ, ಅವರೊಡನೆ ಮಾತುಕತೆ ನಡೆಸಿದರು.

ಟ್ರಾಕ್ ಮೆನ್ ಗಳನ್ನು ಭೇಟಿ ಮಾಡಿರುವ ವೀಡಿಯೊವನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ 73 ಸಾವಿರಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ. “ಭಾರತೀಯ ರೈಲ್ವೆ ಉದ್ಯೋಗಿಗಳ ಪೈಕಿ  ಟ್ರ್ಯಾಕ್‌ ಮೆನ್‌ಗಳು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಅವರನ್ನು ಭೇಟಿ ಮಾಡುವ ಮೂಲಕ ಅವರ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು” ಎಂದು ಹೇಳಿದ್ದಾರೆ.

“ಟ್ರ್ಯಾಕ್‌ ಮೆನ್‌ಗಳು ಪ್ರತಿದಿನ 35 ಕೆಜಿ ಉಪಕರಣಗಳನ್ನು ಹೊತ್ತು ದಿನಂಪ್ರತೀ 8-10 ಕಿಮೀ ನಡೆಯುತ್ತಾರೆ. ಅವರ ವೃತ್ತಿ ಜೀವನವು ಟ್ರ್ಯಾಕ್‌ನಲ್ಲಿ ಪ್ರಾರಂಭವಾಗುತ್ತದೆ. ಅವರು ಟ್ರ್ಯಾಕ್‌ನಿಂದಲೇ ನಿವೃತ್ತರಾಗುತ್ತಾರೆ. ಟ್ರ್ಯಾಕ್‌ ಮೆನ್‌ಗಳಿಗೆ ಇಲಾಖಾ ಪರೀಕ್ಷೆಗೆ ಕುಳಿತುಕೊಳ್ಳಲೂ ಅನುಮತಿಸುವುದಿಲ್ಲ. ಇತರ ಉದ್ಯೋಗಿಗಳು ಉತ್ತಮ ಹುದ್ದೆಗಳನ್ನು ಪಡೆದರೆ, ಟ್ರ್ಯಾಕ್‌ ಮೆನ್ ಗಳು ಟ್ರಾಕ್ ನಲ್ಲಿಯೇ ಇರುತ್ತಾರೆ” ಎಂದು ರಾಹುಲ್ ಗಾಂಧಿ ರೈಲ್ವೆಯೊಳಗಿರುವ ತಾರತಮ್ಯವನ್ನು ಬೆಟ್ಟು ಮಾಡಿದ್ದಾರೆ.

“ಪ್ರತಿ ವರ್ಷ ಸುಮಾರು 550 ಟ್ರ್ಯಾಕ್‌ ಮೆನ್‌ಗಳು ತಮ್ಮ ಸುರಕ್ಷತೆಗೆ ಪೂರಕ ವ್ಯವಸ್ಥೆಗಳಿಲ್ಲದ ಕಾರಣ, ಕೆಲಸದ ವೇಳೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಟ್ರ್ಯಾಕ್‌ ಮೆನ್ ಗಳು ಹೇಳಿದರು. ಪ್ರತಿಕೂಲ ಪರಿಸ್ಥಿತಿಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಹಗಲಿರುಳು ಶ್ರಮಿಸುತ್ತಿರುವ ಟ್ರ್ಯಾಕ್‌ಮೆನ್ ಸಹೋದರರ ಈ ಪ್ರಮುಖ ಬೇಡಿಕೆಗಳನ್ನು ಆಲಿಸಬೇಕು” ಎಂದು ವಿಪಕ್ಷ ನಾಯಕ ತಿಳಿಸಿದ್ದಾರೆ.

“ಪ್ರತಿಯೊಬ್ಬ ಟ್ರ್ಯಾಕ್‌ಮ್ಯಾನ್ ಕೆಲಸದ ಸಮಯದಲ್ಲಿ 'ಪ್ರೊಟೆಕ್ಟರ್ ಡಿವೈಸ್' ಅನ್ನು ಪಡೆಯಬೇಕು. ಇದರಿಂದ ಅವರು ಟ್ರ್ಯಾಕ್‌ನಲ್ಲಿ ಬರುವ ರೈಲಿನ ಬಗ್ಗೆ ಸಕಾಲಿಕ ಮಾಹಿತಿಯನ್ನು ಪಡೆಯಬಹುದು. ಟ್ರ್ಯಾಕ್‌ ಮೆನ್‌ಗಳು ಇಲಾಖಾ ಪರೀಕ್ಷೆಯ (LDCE) ಮೂಲಕ ವೃತ್ತಿ ಜೀವನದಲ್ಲಿ ಪದೋನ್ನತಿಗೆ ಅವಕಾಶ ಪಡೆಯಬೇಕು.ಟ್ರ್ಯಾಕ್‌ ಮೆನ್‌ಗಳ ಕಠಿಣ ಪರಿಶ್ರಮದಿಂದಾಗಿ ಕೋಟ್ಯಂತರ ಜನರ ಸುರಕ್ಷಿತ ರೈಲು ಪ್ರಯಾಣ ಸಾಧ್ಯವಾಗಿದೆ. ನಾವು ಅವರ ಸುರಕ್ಷತೆ ಮತ್ತು ಪ್ರಗತಿ ಎರಡನ್ನೂ ಖಚಿತಪಡಿಸಿಕೊಳ್ಳಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News