"ಅಜಿತ್ ಬಣ 42 ಕ್ಷೇತ್ರಗಳಲ್ಲಿ ಗೆಲ್ಲಲು ಹೇಗೆ ಸಾಧ್ಯ?": ಮಹಾರಾಷ್ಟ್ರ ಚುನಾವಣಾ ಫಲಿತಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಜ್ ಠಾಕ್ರೆ

Update: 2025-01-31 10:37 IST
Photo of Raj Thackeray

ರಾಜ್ ಠಾಕ್ರೆ (Photo: PTI)

  • whatsapp icon

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಎರಡು ತಿಂಗಳ ನಂತರ ಚುನಾವಣಾ ಫಲಿತಾಂಶಗಳ ಬಗ್ಗೆ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನೆಯನ್ನು ಎತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವಿಗೆ ಸಾಧ್ಯವಾದ ಅಜಿತ್ ಪವಾರ್ ಪಕ್ಷ, ವಿಧಾನಸಭೆ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ ಗೆಲ್ಲಲು ಹೇಗೆ ಸಾಧ್ಯವಾಯಿತು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಲೋಕಸಭಾ ಚುನಾವಣೆಯಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಸಾರ್ವಜನಿಕ ಅಭಿಪ್ರಾಯವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೇಗೆ ಬದಲಾಯಿತು? ಎಂದು ಪ್ರಶ್ನಿಸಿದ್ದಾರೆ.

ಎಂಎನ್ ಎಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ತಮ್ಮ ಪಕ್ಷದ ಶಾಸಕನಾಗಿದ್ದ ರಾಜು ಪಾಟೀಲ್ ಸುಮಾರು 1,400 ಮತದಾರರಿರುವ ತನ್ನ ಹಳ್ಳಿಯಿಂದ ಒಂದೇ ಒಂದು ಮತವನ್ನು ಪಡೆದಿಲ್ಲ. ಅದು ಹೇಗೆ ಸಾಧ್ಯ? ಥಾಣೆ ಜಿಲ್ಲೆಯ ಕಲ್ಯಾಣ್ ಗ್ರಾಮಾಂತರದಿಂದ 2019ರ ಚುನಾವಣೆಯಲ್ಲಿ ರಾಜು ಪಾಟೀಲ್ ಗೆಲುವನ್ನು ಸಾಧಿಸಿದ್ದರು. ಆದರೆ 2024ರ ಚುನಾವಣೆಯಲ್ಲಿ ಅವರು ಸೋಲನ್ನು ಕಂಡಿದ್ದಾರೆ. ನಮ್ಮಲ್ಲಿ ಮರಾಠವಾಡದಿಂದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಕಾರ್ಪೊರೇಟರ್ ಇದ್ದಾರೆ. ಅವರು ಪಾಲಿಕೆ ಚುನಾವಣೆಯಲ್ಲಿ ಸುಮಾರು 5,500 ಮತಗಳನ್ನು ಪಡೆದಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ 2,500 ಮತಗಳನ್ನು ಮಾತ್ರ ಪಡೆದಿದ್ದಾರೆ. ಏಳು ಬಾರಿ ಭಾರೀ ಅಂತರದಿಂದ ಆಯ್ಕೆಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಅವರು ಈ ಚುನಾವಣೆಯಲ್ಲಿ 10 ಸಾವಿರ ಮತಗಳಿಂದ ಸೋತಿದ್ದಾರೆ ಎಂದು ಹೇಳಿದ್ದಾರೆ.

ಫಲಿತಾಂಶದ ದಿನ ಮಹಾರಾಷ್ಟ್ರದಾದ್ಯಂತ ಅಸಾಮಾನ್ಯ ಮೌನ ಆವರಿಸಿತ್ತು. ಯಾರಾದರೂ ಗೆದ್ದಾಗ, ಸಾಮಾನ್ಯವಾಗಿ ಸಂಭ್ರಮಾಚರಣೆ ಇರುತ್ತದೆ. ಆದರೆ, ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ನಂತರ ಇಂತಹ ಮೌನ ಹಿಂದೆಂದೂ ಕಂಡಿರಲಿಲ್ಲ. ಆರೆಸ್ಸೆಸ್ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವರು ನನ್ನನ್ನು ಭೇಟಿಯಾಗಲು ಬಂದಿದ್ದರು. ಚುನಾವಣಾ ಫಲಿತಾಂಶಗಳು ಅವರಿಗೆ ಮನವರಿಕೆಯಾಗಿಲ್ಲ ಎಂಬುದು ಅವರ ಮುಖಭಾವದಿಂದಲೇ ವ್ಯಕ್ತವಾಗುತ್ತಿತ್ತು. ನಾನು ಮಾತನಾಡಿದ ಆರೆಸ್ಸೆಸ್ ನ ಕೆಲವರು ಕೂಡ ಆಶ್ಚರ್ಯಚಕಿತರಾದರು. ಅವರಲ್ಲಿ ಓರ್ವರು ತಮಾಷೆಯಾಗಿ ನನ್ನನ್ನು ಕೇಳಿದರು, ಯಾಕೆ ಅಷ್ಟೊಂದು ಮೌನ? ಯಾರೋ ಗೆದ್ದಿರಬೇಕು ಅಲ್ವಾ? ಹಾಗಾದರೆ ಆ ಮೌನ ಏನನ್ನು ಸೂಚಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಹೇಗೆ 42 ಸ್ಥಾನಗಳನ್ನು ಗೆದ್ದುಕೊಂಡಿದೆ? ಶರದ್ ಪವಾರ್ ಅವರ ಎನ್ ಸಿಪಿ ಕೇವಲ 10 ಸ್ಥಾನಗಳಲ್ಲಿ ಮಾತ್ರ ಗೆಲುವನ್ನು ಸಾಧಿಸಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗರಿಷ್ಠ 13 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಶರದ್ ಪವಾರ್ ನೇತೃತ್ವದ ಎನ್ ಸಿಪಿ 8 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವನ್ನು ಕಂಡಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ 42 ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಅದು ಹೇಗೆ ಸಾಧ್ಯ? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News