ರಾಮಮಂದಿರ ನಿರ್ಮಾಣ ಅಪೂರ್ಣವಾಗಿರುವುದರಿಂದ ಪ್ರಾಣ ಪ್ರತಿಷ್ಠಾನ ಮಾಡುವುದು ಶಾಸ್ತ್ರಗಳಿಗೆ ವಿರುದ್ಧ: ಜ್ಯೋತಿರ್ಮಠದ ಶಂಕರಾಚಾರ್ಯ ಆಕ್ಷೇಪ
ಲಕ್ನೊ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮ್ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುರಿಯ ಗೋವರ್ಧನ ಮಠಾಧೀಶರು ನಿರಾಕರಿಸಿದ ಬೆನ್ನಿಗೇ, ದೇಶದ ನಾಲ್ಕು ಪ್ರಮುಖ ಶಂಕರಾಚಾರ್ಯರು ಅಥವಾ ಧಾರ್ಮಿಕ ಮುಖ್ಯಸ್ಥರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಉತ್ತರಾಖಂಡದ ಜ್ಯೋತಿರ್ಮಠ ಅವಿಮುಕ್ತೇಶ್ವರಾನಾನಂದ ಸರಸ್ವತಿ ಸ್ವಾಮೀಜಿಗಳು ಪ್ರಕಟಿಸಿದ್ದಾರೆ.
ವಿಶೇಷವಾಗಿ ರಾಮಮಂದಿರ ನಿರ್ಮಾಣವು ಇನ್ನೂ ಅಪೂರ್ಣವಾಗಿರುವುದರಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಶಾಸ್ತ್ರಗಳು ಅಥವಾ ಹಿಂದೂ ಧಾರ್ಮಿಕ ಶಾಸನಗಳಿಗೆ ವಿರುದ್ಧ ಎಂದು ಮಂಗಳವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಅವರು ಆಕ್ಷೇಪಿಸಿದ್ದಾರೆ.
ಈ ಶಂಕರಾಚಾರ್ಯರು ನಾಲ್ಕು ಮಠಗಳ ಪೈಕಿ ಒಂದು ಮಠದ ಮಠಾಧೀಶರಾಗಿದ್ದು, 8ನೆಯ ಶತಮಾನದಲ್ಲಿ ಹಿಂದೂ ಮಹರ್ಷಿ ಆದಿ ಶಂಕರ ಸ್ಥಾಪಿಸಿದ ಹಿಂದೂ ಅದ್ವೈತ ವೇದಾಂತ ಪರಂಪರೆಯ ಭಾಗವಾಗಿದ್ದಾರೆ. ಜ್ಯೋತಿರ್ಮಠ (ಜೋಶಿಮಠ) ಮತ್ತು ಗೋವರ್ಧನ ಮಠವಲ್ಲದೆ ಶೃಂಗೇರಿ ಶಾರದಾ ಪೀಠ (ಶೃಂಗೇರಿ, ಕರ್ನಾಟಕ) ಹಾಗೂ ದ್ವಾರಕಾ ಶಾರದಾ ಪೀಠ (ದ್ವಾರಕಾ, ಗುಜರಾತ್) ಎಂಬ ಮತ್ತೆರಡು ಮಠಗಳಿವೆ.
ಗಮನಾರ್ಹ ಸಂಗತಿಯೆಂದರೆ, ಆದಿ ಶಂಕರ ಹಾಗೂ ಅವರ ಆಲೋಚನಾ ಲಹರಿಯು ಶೈವ ಪಂಥದಿಂದ ಪ್ರಭಾವಿತವಾಗಿದೆ. ಈ ಪಂಥದಲ್ಲಿ ಹಿಂದೂ ದೈವಗಳಾದ ಶಿವ ಮತ್ತು ಶಕ್ತಿಯನ್ನು ಆರಾಧಿಸಲಾಗುತ್ತದೆ. ವೈಷ್ಣವ ಪಂಥದ ಕಲ್ಪನೆಯೊಂದಿಗೆ ಶಕ್ತಿಯನ್ನು ಸೇರ್ಪಡೆ ಮಾಡಲಾಗಿದ್ದರೂ ಅಥವಾ ಹಿಂದೂ ದೈವವಾದ ವಿಷ್ಣು ಮತ್ತು ರಾಮ ಸೇರಿದಂತೆ ಆತನ ಹಲವಾರು ಅವತಾರಗಳನ್ನು ಆರಾಧಿಸಿದರೂ ಕೂಡಾ ಶೈವ ಪಂಥೀಯರು ಶಕ್ತಿಯನ್ನು ಆರಾಧಿಸುತ್ತಾರೆ.
ಜ್ಯೋತಿರ್ಮಠದ 46ನೇ ಶಂಕರಾಚಾರ್ಯಾರಾಗಿರುವ ಅವಿಮುಕ್ತೇಶ‍್ವರಾನಂದ ಸರಸ್ವತಿ ಅವರು, “ನಾಲ್ವರು ಶಂಕರಾಚಾರ್ಯರ ನಿರ್ಧಾರವನ್ನು ಮೋದಿ ವಿರೋಧಿ ಎಂದು ಭಾವಿಸಬಾರದು. ಆದರೆ, ಈ ನಿರ್ಧಾರವನ್ನು ತಾವು ಶಾಸ್ತ್ರಗಳ ವಿರುದ್ಧ ನಡೆಯಬಾರದು ಎಂಬ ಕಾರಣಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ತಮ್ಮ ವಿಡಿಯೊದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
“ಕಾರ್ಯಕ್ರಮಕ್ಕೆ ಹೋಗದಿರಲು ಕಾರಣವೇನು? ಯಾವುದೇ ತಿರಸ್ಕಾರ ಅಥವಾ ಸೇಡಿನಿಂದಲ್ಲ. ಬದಲಿಗೆ, ಶಾಸ್ತ್ರ ವಿಧಿಗಳನ್ನು ಪಾಲಿಸುವುದು ಶಂಕರಾಚಾರ್ಯರ ಕರ್ತವ್ಯವಾಗಿದ್ದು, ಅವನ್ನು ಪಾಲಿಸುವುದನ್ನು ಖಾತ್ರಿಗೊಳಿಸುವುದೂ ಅವರ ಕರ್ತವ್ಯವಾಗಿದೆ. ಬಹು ದೊಡ್ಡ ಸಮಸ್ಯೆಯೆಂದರೆ, ರಾಮಮಂದಿರವಿನ್ನೂ ಅಪೂರ್ಣವಾಗಿದ್ದರೂ ಪ್ರಾಣ ಪ್ರತಿಷ್ಠಾನವನ್ನು ನಡೆಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. “ನಾವಿದನ್ನು ಹೇಳಿದರೆ, ನಮ್ಮನ್ನು ಮೋದಿ ವಿರೋಧಿ” ಎಂದು ದೂಷಿಸಲಾಗುತ್ತದೆ. ಇದರಲ್ಲಿ ಮೋದಿ ವಿರೋಧಿಯಾದುದು ಏನಿದೆ?” ಎಂದೂ ಅವರು ಪ್ರಶ‍್ನಿಸಿದ್ದಾರೆ.
ಪುರಿಯ ಗೋವರ್ಧನ ಮಠಾಧೀಶರಾದ ನಿಶ್ಚಲಾನಂದ ಸರಸ್ವತಿ ಅವರು, “ನಾನು ನನ್ನ ಸ್ಥಾನದ ಬಗ್ಗೆ ಪ್ರಜ್ಞೆ ಇರುವುದರಿಂದ ನಾನು ಕಾರ್ಯಕ್ರಮದಿಂದ ದೂರ ಉಳಿಯುತ್ತಿದ್ದೇನೆ ಎಂದು ಪ್ರಕಟಿಸಿದ ಬೆನ್ನಿಗೇ ಈ ಹೇಳಿಕೆಯು ಹೊರ ಬಿದ್ದಿದೆ.
“ನಾನು ಅಲ್ಲೇನು ಮಾಡಲಿ? ಮೋದಿಯು ರಾಮಮಂದಿರವನ್ನು ಉದ್ಘಾಟಿಸಿ, ವಿಗ್ರಹವನ್ನು ಸ್ಪರ್ಶಿಸಿದಾಗ ನಾನಲ್ಲಿ ನಿಂತುಕೊಂಡು ಚಪ್ಪಾಳೆ ತಟ್ಟಲೆ? ನನಗೆ ಯಾವುದೇ ಸ್ಥಾನಮಾನ ಬೇಕಿಲ್ಲ. ನನಗೆ ಅದಾಗಲೇ ದೊಡ್ಡ ಸ್ಥಾನವಿದೆ. ನನಗೆ ಯಾವುದೇ ಲಾಭ ಬೇಕಿಲ್ಲ. ಆದರೆ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರು ಏನು ಮಾಡಬೇಕು?” ಎಂದು ಅವರು ಪ್ರಶ‍್ನಿಸುತ್ತಿರುವ ದಿನಾಂಕವಿಲ್ಲದ ವಿಡಿಯೊವನ್ನು ನಾಗಾಲ್ಯಾಂಡ್ ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಮೋದಿ ಧಾರ್ಮಿಕ ವ್ಯವಹಾರಗಳ ನಡುವೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದರೂ, ನನಗೆ ಅಯೋಧ್ಯೆಗೆ ಭೇಟಿ ನೀಡಲು ಯಾವುದೇ ತಿರಸ್ಕಾರವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
“ಇದು ದುರಹಂಕಾರವಲ್ಲ. ಆದರೆ, ನಾನು ನನ್ನ ಸ್ಥಾನದ ಘನತೆಯ ಬಗ್ಗೆ ಎಚ್ಚರದಿಂದಿದ್ದೇನೆ. ಹೀಗಾಗಿಯೇ ನಾನು ಅಲ್ಲಿಗೆ ಹೋಗುತ್ತಿಲ್ಲ. ನಾನು ಆಮಂತ್ರಣ ಪತ್ರ ಸ್ವೀಕರಿಸಿದ್ದು, ನನ್ನೊಂದಿಗೆ ಓರ್ವ ವ್ಯಕ್ತಿಯನ್ನು ಕರೆ ತರಬಹುದು ಎಂದು ಅದರಲ್ಲಿ ಹೇಳಲಾಗಿದೆ. ನಾನು ಇನ್ನೊಬ್ಬರನ್ನು ಯಾಕೆ ಕರೆದುಕೊಂಡು ಬರಬೇಕು?” ಎಂದು ಅವರು ಪ್ರಶ‍್ನಿಸಿದ್ದಾರೆ.
“ರಾಮಮಂದಿರವು ವೈಷ್ಣವ ಪಂಥಕ್ಕೆ ಸೇರಿರುವ ರಮಾನಂದ ಸಂಪ್ರದಾಯಸ್ಥರಿಗೆ ಸೇರಿದೆಯೇ ಹೊರತು, ಸನ್ಯಾಸಿಗಳಿಗಾಗಲಿ, ಶೈವರಿಗಾಗಲಿ ಅಥವಾ ಶಾಕ್ತ ಪಂಥದವರಿಗಾಗಲಿ ಅಲ್ಲ” ಎಂದು ‘ಅಮರ್ ಉಜಾಲ’ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ವಿಶ‍್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ ಎರಡು ದಿನಗಳ ನಂತರ ಜ್ಯೋತಿರ್ಮಠದ ಮುಖ್ಯಸ್ಥರ ಮೇಲಿನ ಹೇಳಿಕೆಯು ಹೊರ ಬಿದ್ದಿದೆ.
ಅಪೂರ್ಣ ಮಂದಿರ
ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಗಳ ಪ್ರಕಾರ, ತಕ್ಷಣವೇ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಧಾವಿಸುವ ಅಗತ್ಯವಿಲ್ಲ. ಸರ್ಕಾರವು ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೂ ಕಾಯಬಹುದಿತ್ತು. ಶಾಸ್ತ್ರಗಳ ವಿಚಾರಕ್ಕೆ ಬಂದಾಗ ಇದು ಬಹುದೊಡ್ಡ ನಿರ್ಲಕ್ಷವಾಗಿದೆ” ಎಂದು ಆಕ್ಷೇಪಿಸಿದ್ದಾರೆ.
“ನಾವು ನಮ್ಮ ಧರ್ಮ ಶಾಸ್ತ್ರಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಹಾಗೂ ಸಾರ್ವಜನಿಕರೂ ಹಾಗೆ ಮಾಡಬೇಕು ಎಂದು ನಾವು ಬಯಸುತ್ತೇವೆ. ಯಾಕೆಂದರೆ, ಪಾಪ-ಪುಣ್ಯಗಳನ್ನು ನಾವು ಹಾಗೆಯೇ ನೋಡಲು ಸಾಧ್ಯ. ರಾಮ ಜೀವಿಸಿದ್ದ ಎಂದು ಯಾರು ಹೇಳಿದ್ದು? ನಮ್ಮ ಧರ್ಮ ಶಾಸ್ತ್ರಗಳು” ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಮಮಂದಿರವು ವೈಷ್ಣವ ಧರ್ಮದ ರಮಾನಂದ ಪಂಥಕ್ಕೆ ಸೇರಿದ್ದು ಎಂಬ ಚಂಪತ್ ರಾಯ್ ಹೇಳಿಕೆಯನ್ನೂ ಅವರು ಖಂಡಿಸಿದಂತೆ ಕಂಡು ಬಂದಿತು.
“ಈಗ ನಮ್ಮ ನಿರ್ಧಾರವು ಬಹಿರಂಗವಾಗಿದೆ. ಈ ಸ್ಥಳವು ರಮಾನಂದ ಸಂಪ್ರದಾಯಸ್ಥರಿಗೆ ಮೀಸಲಾಗಿರುವುದರಿಂದ ಶಂಕರಾಚಾರ್ಯರ ಅಗತ್ಯವಿಲ್ಲ ಎಂದು ಚಂಪತ್ ರಾಯ್ ಹೇಳುತ್ತಿದ್ದಾರೆ. ಪ್ರಶ‍್ನೆ ಏನೆಂದರೆ, ರಾಮಮಂದಿರವು ರಮಾನಂದ ಪಂಥಕ್ಕೆ ಸೇರಿರುವುದಾದರೆ, ಚಂಪತ್ ರಾಯ್ ಏಕೆ ಅಲ್ಲಿದ್ದಾರೆ? ನೃಪೇಂದ್ರ ಮಿಶ‍್ರಾ (ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ) ಏಕೆ ಅಲ್ಲಿದ್ದಾರೆ? ರಾಜಾ ಸಾಹೇಬ್ (ಈ ಹಿಂದಿನ ಅಯೋಧ್ಯೆಯ ರಾಜವಂಶಸ್ಥ ಹಾಗೂ ರಾಮಮಂದಿರ ಟ್ರಸ್ಟಿ ಬಿಮಲೇಂದ್ರ ಪ್ರತಾಪ್ ಮಿಶ‍್ರಾ) ಏಕೆ ಅಲ್ಲಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದಾರೆ. ಇವರೆಲ್ಲ ಪ್ರಾಣ ಪ್ರತಿಷ್ಠಾಪನೆ ನೆರವೇರುವುದಕ್ಕೂ ಮುನ್ನವೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ, ಅವನ್ನು ರಮಾನಂದ ಸಂಪ್ರದಾಯಸ್ಥರಿಗೆ ಬಿಟ್ಟುಕೊಡಬೇಕು ಎಂದೂ ಹೇಳಿದ್ದಾರೆ.
ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಪ್ರಕಾರ, ಪ್ರಾಣ ಪ್ರತಿಷ್ಠಾಪನೆಯನ್ನು ರಾಜಕೀಕರಣಗೊಳಿಸಲಾಗಿದ್ದು, ಧಾರ್ಮಿಕ ಮುಖಂಡರನ್ನು ಬೇಕಂತಲೇ ನೇಪಥ್ಯಕ್ಕೆ ಸರಿಸಲಾಗಿದೆ ಎನ್ನುತ್ತಾರೆ.
“ಅವರು ದೇಣಿಗೆಯನ್ನು ಸ್ವೀಕರಿಸುವಾಗಲೇಕೆ ರಾಮಮಂದಿರವು ರಮಾನಂದ ಸಂಪ್ರದಾಯ ಪಂಥೀಯರಿಗೆ ಸೇರಿದೆ ಎಂದು ಘೋಷಿಸಲಿಲ್ಲ? ಆ ಸಂದರ್ಭದಲ್ಲಿ ನೀವು ದೇಶಾದ್ಯಂತ ಸನಾತನ ಧರ್ಮೀಯರಿಂದ ದೇಣಿಗೆಗಳನ್ನು ಸ್ವೀಕರಿಸಿದಿರಿ. ನೀವು ನಮ್ಮಿಂದಲೂ ದೇಣಿಗೆಯನ್ನು ಸ್ವೀಕರಿಸಿದಿರಿ. ರಾಮಮಂದಿರವು ಶಂಕರಾಚಾರ್ಯರಿಗೆ ಸೇರಿಲ್ಲವಾದರೆ, ನಮ್ಮಿಂದೇಕೆ ದೇಣಿಗೆಯನ್ನು ಸ್ವೀಕರಿಸಿದಿರಿ?” ಎಂದು ಅವರು ಕಟುವಾಗಿ ಪ್ರಶ‍್ನಿಸಿದ್ದಾರೆ.
ನಿರ್ಮೋಹಿ ಅಖಾಡದವರಿಗೆ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ರಾಮಮಂದಿರ ಟ್ರಸ್ಟ್ ನಿರ್ಬಂಧಿಸಿದೆ. ನಿರ್ಮೋಹಿ ಅಖಾಡವು ರಮಾನಂದ ಪಂಥದ ಒಂದು ಧಾರ್ಮಿಕ ಪಂಗಡವಾಗಿದ್ದು, ಅಯೋಧ್ಯೆ ಸ್ವತ್ತಿನ ವಿವಾದದಲ್ಲಿ ಓರ್ವ ಅರ್ಜಿದಾರನೂ ಆಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
“ಹಿಂದೆ ಕೂಡಾ ನಿರ್ಮೋಹಿ ಅಖಾಡವು ಅಲ್ಲಿ ಪೂಜೆ ಸಲ್ಲಿಸುತ್ತಿತ್ತು. ಆ ಜವಾಬ‍್ದಾರಿಯನ್ನು ಅದಕ್ಕೆ ಮತ್ತೆ ನೀಡಬೇಕಿದೆ. ನೀವೇಕೆ ಹೆಚ್ಚು ಪೂಜಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೀರಿ?” ಎಂದು ಮಠಾಧೀಶರು ಪ್ರಶ್ನಿಸಿದ್ದಾರೆ. “ನೀವು ಪೂಜೆಯ ಜವಾಬ್ದಾರಿಯನ್ನು ನಿರ್ಮೋಹಿ ಅಖಾಡಕ್ಕೆ ಹಸ್ತಾಂತರಿಸಿ ಹಾಗೂ ಮಂದಿರದ ವ್ಯವಸ್ಥೆಯನ್ನು ರಮಾನಂದ ಸಂಪ್ರದಾಯ ಪಂಥದವರಿಗೆ ವಹಿಸಿ. ನಾವದನ್ನು ಒಪ್ಪುತ್ತೇವೆ. ಇದರಿಂದ ನಾವು ನಾಲ್ವರು ಶಂಕರಾಚಾರ್ಯರೂ ಸಂತಸಗೊಳ್ಳುತ್ತೇವೆ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
22 जनवरी के प्रतिष्ठा के पूर्व रामानन्द सम्प्रदाय को मन्दिर सौंपे रामजन्मभूमि तीर्थ क्षेत्र ट्रस्ट -
— 1008.Guru (@jyotirmathah) January 9, 2024
रामजन्मभूमि तीर्थ क्षेत्र ट्रस्ट के महासचिव चंपतराय जी के इस बयान पर पूज्यपाद ज्योतिष्पीठाधीश्वर जगद्गुरु शंकराचार्य स्वामिश्रीः अविमुक्तेश्वरानंदः सरस्वती '१००८' की प्रतिक्रिया… pic.twitter.com/h0IqLN8wFe
22 जनवरी के प्रतिष्ठा के पूर्व रामानन्द सम्प्रदाय को मन्दिर सौंपे रामजन्मभूमि तीर्थ क्षेत्र ट्रस्ट -
— 1008.Guru (@jyotirmathah) January 9, 2024
रामजन्मभूमि तीर्थ क्षेत्र ट्रस्ट के महासचिव चंपतराय जी के इस बयान पर पूज्यपाद ज्योतिष्पीठाधीश्वर जगद्गुरु शंकराचार्य स्वामिश्रीः अविमुक्तेश्वरानंदः सरस्वती '१००८' की प्रतिक्रिया… pic.twitter.com/h0IqLN8wFe