ದಾರಿ ತಪ್ಪಿಸುವ ಜಾಹೀರಾತು ಪ್ರಕರಣ: ಇಂದು ಮತ್ತೆ ಬೇಷರತ್‌ ಸಾರ್ವಜನಿಕ ಕ್ಷಮಾಪಣೆ ಜಾಹೀರಾತು ಪ್ರಕಟಿಸಿದ ಪತಂಜಲಿ

Update: 2024-04-24 14:19 GMT

Photo credit: NDTV

ಹೊಸದಿಲ್ಲಿ: ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಸಂಸ್ಥೆಯ ಯೋಗ ಗುರು ಬಾಬಾ ರಾಮದೇವ್‌ ಮತ್ತು ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಇಂದು ಮತ್ತೆ ದೈನಿಕಗಳಲ್ಲಿ ಸಾರ್ವಜನಿಕ ಕ್ಷಮಾಪಣೆ ಜಾಹೀರಾತು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸದೇ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಈ ಜಾಹೀರಾತು ಪ್ರಕಟಿಸಲಾಗಿದೆ.

ಪತಂಜಲಿ ಸಂಸ್ಥೆಯ ಈಗಾಗಲೇ ಕ್ಷಮಾಪಣೆ ಜಾಹೀರಾತು ಪ್ರಕಟಿಸಿದ್ದರೂ ಮಂಗಳವಾರದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಕುರಿತು ಪ್ರಶ್ನಿಸಿ, ಪ್ರಕಟಿಸಿದ ಕ್ಷಮಾಪಣೆ ಜಾಹೀರಾತು, ಸಂಸ್ಥೆಯ ದಾರಿ ತಪ್ಪಿಸುವ ಜಾಹೀರಾತುಗಳ ಗಾತ್ರದ್ದೇ ಆಗಿವೆಯೇ ಎಂದು ಪ್ರಶ್ನಿಸಿತ್ತು.

ಇದರ ಬೆನ್ನಲ್ಲೇ ಇಂದು ಸಂಸ್ಥೆ ಪ್ರಕಟಿಸಿರುವ ಕ್ಷಮಾಪಣೆ ಜಾಹೀರಾತು ದೈನಿಕದ ಪುಟದ ನಾಲ್ಕನೇ ಒಂದಂಶದಷ್ಟು ದೊಡ್ಡದಾಗಿದ್ದು “ಬೇಷರತ್‌ ಸಾರ್ವಜನಿಕ ಕ್ಷಮಾಯಾಚನೆ” ಎಂಬ ಶೀರ್ಷಿಕೆ ನೀಡಲಾಗಿದೆ.

“ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ಹಿನ್ನೆಲೆಯಲ್ಲಿ ನಾವು ವೈಯಕ್ತಿಕವಾಗಿ ಹಾಗೂ ಕಂಪನಿಯ ಪರವಾಗಿ ಮಾನ್ಯ ಸುಪ್ರೀಂ ಕೋರ್ಟಿನ ಆದೇಶ/ಸೂಚನೆಗಳನ್ನು ಪಾಲಿಸದೇ ಇರುವುದಕ್ಕೆ ಬೇಷರತ್‌ ಕ್ಷಮೆಯಾಚಿಸುತ್ತೇವೆ,” ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News