ಅತ್ಯಾಚಾರ, ಕೊಲೆ ಬೆದರಿಕೆ : ಸ್ವಾತಿ ಮಲಿವಾಲ್ ಆರೋಪ

Update: 2024-05-26 17:39 GMT

ಸ್ವಾತಿ ಮಳಿವಾಲ್, ಧ್ರುವ ರಾಠಿ | PTI

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಆಪ್)ದ ನಾಯಕರು ಮತ್ತು ಕಾರ್ಯಕರ್ತರು ನಡೆಸಿದ್ದಾರೆನ್ನಲಾದ ‘ಚಾರಿತ್ರ್ಯ ವಧೆ’ ಅಭಿಯಾನದಿಂದಾಗಿ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಳಿವಾಲ್ ರವಿವಾರ ಆರೋಪಿಸಿದ್ದಾರೆ.

ಅದೂ ಅಲ್ಲದೆ, ಯೂಟ್ಯೂಬರ್ ಧ್ರುವ ರಾಠಿ ನನ್ನ ವಿರುದ್ಧ ‘‘ಏಕಪಕ್ಷೀಯ’’ ವೀಡಿಯೊವೊಂದನ್ನು ಪ್ರಸರಿಸಿರುವ ಮೂಲಕ ನನ್ನ ವಿರುದ್ಧದ ದ್ವೇಷ ಅಭಿಯಾನಕ್ಕೆ ಉತ್ತೇಜನ ನೀಡಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ನನ್ನದೇ ಪಕ್ಷದ ನಾಯಕರು ನನ್ನ ವಿರುದ್ಧ ಚಾರಿತ್ಯ್ಯ ವಧೆಯಲ್ಲಿ ತೊಡಗಿದ್ದಾರೆ ಮತ್ತು ಸಂತ್ತಸ್ತೆಯನ್ನೇ ಅವಮಾನಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತನಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ನಿಂದನಾತ್ಮಕ ಸಂದೇಶಗಳು ಮತ್ತು ಅತ್ಯಾಚಾರ ಬೆದರಿಕೆಗಳ ಹಲವು ಸ್ಕ್ರೀನ್‌ಶಾಟ್‌ಗಳನ್ನು ಅವರು ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘‘ನನ್ನ ಪಕ್ಷ ಆಪ್‌ನ ನಾಯಕರು ಮತ್ತು ಕಾರ್ಯಕರ್ತರು ನನ್ನ ವಿರುದ್ಧ ಚಾರಿತ್ಯ್ಯ ವಧೆ ಅಭಿಯಾನ ನಡೆಸಿದರು ಮತ್ತು ಸಂತ್ರಸ್ತೆಯನ್ನೇ ಅವಮಾನಕ್ಕೆ ಗುರಿಪಡಿಸಿದರು. ನನ್ನ ಬಗ್ಗೆ ಜನರಲ್ಲಿ ವಿರೋಧದ ಭಾವನೆಗಳನ್ನು ಹುಟ್ಟಿಸಿದರು. ಈಗ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಯೂಟ್ಯೂಬರ್ ಧ್ರುವ ರಾಠಿ ನನ್ನ ವಿರುದ್ಧ ಏಕಪಕ್ಷೀಯ ವೀಡಿಯೊವೊಂದನ್ನು ಪ್ರಸಾರ ಮಾಡಿದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ’’ ಎಂದು ಮಳಿವಾಲ್ ತನ್ನ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಸಹಾಯಕ ಬಿಭವ್ ಕುಮಾರ್ ವಿರುದ್ಧದ ನನ್ನ ದೂರನ್ನು ಹಿಂದಕ್ಕೆ ಪಡೆಯುವಂತೆ ಪಕ್ಷದ ನಾಯಕತ್ವವು ನನ್ನನ್ನು ಬೆದರಿಸಲು ಯತ್ನಿಸುತ್ತಿದೆ ಎಂದು ದಿಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಳಿವಾಲ್ ಹೇಳಿಕೊಂಡರು.

ತನ್ನ ವಿರುದ್ಧದ ಆರೋಪಗಳನ್ನು ಆಮ್ ಆದ್ಮಿ ಪಕ್ಷ ನಿರಾಕರಿಸಿದೆ. ತನ್ನ ಪಿತೂರಿಯ ಭಾಗವಾಗುವಂತೆ ಬಿಜೆಪಿಯು ಮಳಿವಾಲ್‌ರನ್ನು ‘‘ಬ್ಲ್ಯಾಕ್‌ಮೇಲ್’’ ಮಾಡುತ್ತಿದೆ ಎಂದು ಅದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News