ಸಾಕ್ಷಿ - ಪೂನಿಯಾ ಮುಂದಿನ ತಲೆಮಾರಿನ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದೆ ಬರಬೇಕು: ಅನುರಾಗ್‌ ಠಾಕೂರ್‌

Update: 2023-12-23 14:28 GMT

Photo: PTI

ಹೊಸದಿಲ್ಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಪದ್ಮಶ್ರೀಯನ್ನು ಹಿಂದಿರುಗಿಸಿರುವ ಹಾಗೂ ಇತರೆ ಕುಸ್ತಿಪಟುಗಳು ತಮ್ಮ ಅಸಮಾಧಾನ ಹೊರ ಹಾಕಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಿರಾಕರಿಸಿದ್ದಾರೆ.

ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಇನ್ನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಠಾಕೂರ್‌ ಹೇಳಿದ್ದಾರೆ. 

ಅದಾಗ್ಯೂ, ನಮ್ಮ ಹಿಂದಿನ ಚಾಂಪಿಯನ್‌ಗಳು ಮುಂದೆ ಬಂದು, ಉದಯೋನ್ಮುಖ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಕೋಚಿಂಗ್‌ ನೀಡಬೇಕೆಂದು ಅವರು ಕರೆ ನೀಡಿದ್ದಾರೆ. 

ಇಲ್ಲಿನ ಎಸ್‌ಎಐ ಕೇಂದ್ರದಲ್ಲಿ ಖ್ಯಾತ ಕ್ರೀಡಾಪಟುಗಳು ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ನಮ್ಮ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್ (ಹಾಂಗ್‌ಝೌನಲ್ಲಿ) ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಇದನ್ನು ಹೈಲೈಟ್ ಮಾಡಬೇಕಾಗಿದೆ,'' ಎಂದು ಠಾಕೂರ್ ಹೇಳಿದರು.

''ಅವರು ಏಷ್ಯನ್ ಗೇಮ್ಸ್‌ಗೆ ಹೊರಡುವ ಮುನ್ನ, ಅವರು 100 ಪದಕದ ಗಡಿಯನ್ನು ದಾಟಲು ಸಾಧ್ಯವೇ ಎಂದು ನಾನು ಅವರನ್ನು ಕೇಳಿದ್ದೆ, ಅವರು ಸಾಮೂಹಿಕ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು‌, ನಂತರ ಅದನ್ನು ಮಾಡಿಯೂ ತೋರಿಸಿದ್ದಾರೆ” ಎಂದು ಠಾಕೂರ್‌ ಹೇಳಿದ್ದಾರೆ. 

 ''ನಾವು ಹಲವಾರು ಪ್ರಮುಖ ಸ್ಪರ್ಧೆಗಳಲ್ಲಿ ಗೆದ್ದಿದ್ದೇವೆ. ನಾವು ಕಳೆದ ವರ್ಷ ಮೊದಲ ಥಾಮಸ್ ಕಪ್ ಗೆದ್ದಿದ್ದೇವೆ. ನಾವು ಹಾಕಿ, ಅಥ್ಲೆಟಿಕ್ಸ್ ಮತ್ತು ಇತರ ಈವೆಂಟ್‌ಗಳಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದೇವೆ. ಈಗ, ಚಾಂಪಿಯನ್‌ಗಳು ಮುಂಬರುವ ಅಥ್ಲೀಟ್‌ಗಳಿಗೆ ಜ್ಞಾನ ಮತ್ತು ಅನುಭವವನ್ನು ಧಾರೆ ಎರೆಯಬೇಕು. ಇದರಿಂದ ನಾವು ಭವಿಷ್ಯದಲ್ಲಿ ಈ ಪ್ರಯತ್ನವನ್ನು ಉತ್ತಮಗೊಳಿಸಬಹುದು” ಎಂದು ಠಾಕೂರ್‌ ಹೇಳಿದ್ದಾರೆ. 

ಠಾಕೂರ್ ಅವರು SAI ನಲ್ಲಿ ಹೊಸ ಹಾಸ್ಟೆಲ್ ಸೌಲಭ್ಯಗಳು ಮತ್ತು ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಉದ್ಘಾಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News