ಈ ವರ್ಷ ಸಂಶೋಧಕರಿಗೆ ಇನ್ನೂ ದೊರೆಯದ ಕೇಂದ್ರದ ಅನುದಾನ
ಈ ವಿತ್ತ ವರ್ಷಕ್ಕೆ ಸಂಶೋಧನಾ ಕಾರ್ಯಗಳಿಗೆ ಕೇಂದ್ರೀಯ ಏಜನ್ಸಿಗಳಿಂದ ಅನುದಾನ ಪಡೆಯಬೇಕಿದ್ದ ಪ್ರಮುಖ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಇನ್ನೂ ಅನುದಾನಕ್ಕಾಗಿ ಕಾಯುತ್ತಿದ್ದಾರೆ...
ಮುಂಬೈ:ಈ ವಿತ್ತ ವರ್ಷಕ್ಕೆ ಸಂಶೋಧನಾ ಕಾರ್ಯಗಳಿಗೆ ಕೇಂದ್ರೀಯ ಏಜನ್ಸಿಗಳಿಂದ ಅನುದಾನ ಪಡೆಯಬೇಕಿದ್ದ ಪ್ರಮುಖ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಇನ್ನೂ ಅನುದಾನಕ್ಕಾಗಿ ಕಾಯುತ್ತಿದ್ದಾರೆ ಎಂದು timesofindia ವರದಿ ಮಾಡಿದೆ.
ನ್ಯಾಷನಲ್ ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿರುವ ಕೇಂದ್ರ ಹೆಚ್ಚು ಅನುದಾನದ ಭರವಸೆ ನೀಡಿದ್ದರೂ ಈ ಸಂಸ್ಥೆಯ ಖರೀದಿಗಳನ್ನು ತಡೆಹಿಡಿಯಲಾಗಿದೆ ಹಾಗೂ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ನೀಡಲಾಗಿಲ್ಲ.
ಅಷ್ಟೇ ಅಲ್ಲದೆ ಐಐಟಿ ಮತ್ತು ಐಐಎಸ್ಸಿಯಂತಹ ಉನ್ನತ ಸಂಸ್ಥೆಗಳಿಗೆ ಅನುದಾನ ವರ್ಗಾಯಿಸುವ ಹೊಸ ವಿಧಾನವನ್ನು ಕೇಂದ್ರ ರಚಿಸಿದೆ. ಇದಕ್ಕಾಗಿ ಈ ಸಂಸ್ಥೆಗಳು ಝೀರೋ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯಬೇಕಿದ್ದು ಸಂಸ್ಥೆಗಳು ಖರ್ಚು ಮಾಡಿದ ನಂತರವೇ ಹಣ ಜಮೆಯಾಗುತ್ತದೆ.
ದೇಶಾದ್ಯಂತ ವಿವಿಧ ಪ್ರಾಜೆಕ್ಟ್ಗಳಿಗೆ ಸಂಬಂಧಿಸಿದ ಖಾತೆಗಳನ್ನು ಕ್ಲಿಯರ್ ಮಾಡದ ಹೊರತು ಯಾವುದೇ ಸಂಶೋಧಕ ತಮ್ಮ ವಾರ್ಷಿಕ ಅನುದಾನ ಪಡೆಯುವುದಿಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿರುವ ಹಿರಿಯ ವಿಜ್ಞಾನಿಯೊಬ್ಬರು, ಸದ್ಯ ತಮ್ಮ ಪ್ರಾಜೆಕ್ಟ್ ಸಿಬ್ಬಂದಿಗೆ ತಾವೇ ವೇತನ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಿತ ಬಯೋಟೆಕ್ನಾಲಜಿ ಇಲಾಖೆಯಿಂದಲೂ ಅನುದಾನ ದೊರೆಯುತ್ತಿಲ್ಲ ಎಂದು ಹೇಳಲಾಗಿದ್ದು ಕೇಳಿದರೆ ಇಲಾಖೆಯ ಕೈಯ್ಯಲ್ಲಿ ಏನೂ ಮಾಡಲಾಗದು ಎಂದು ಹೇಳಲಾಗುತ್ತಿದೆ ಎಂದು ಹಲವು ವಿಜ್ಞಾನಿಗಳು ತಿಳಿಸುತ್ತಾರೆ.
ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರತಿಕ್ರಿಯಿಸಿಲ್ಲ.