ವೆಬ್‍ನಲ್ಲಿ ಲೈಂಗಿಕ ಆಮಿಷ: ಸಲಿಂಗಿಗಳ ಬಟ್ಟೆ ಬಿಚ್ಚಿಸಿ ದರೋಡೆ

Update: 2023-08-04 04:24 GMT

Photo: TOI

ಹೈದರಾಬಾದ್: ಸಾಮಾಜಿಕ ಜಾಲತಾಣ ಅಪ್ಲಿಕೇಶನ್ ಮೂಲಕ ಸಲಿಂಗಿಗಳಿಬ್ಬರಿಗೆ ಲೈಂಗಿಕ ಆಮಿಷವೊಡ್ಡಿ ಅವರನ್ನು ತನ್ನ ಕೊಠಡಿಗೆ ಕರೆಸಿಕೊಂಡ ರೌಡಿಶೀಟರ್ ಒಬ್ಬ, ಇಬ್ಬರನ್ನು ವಿವಸ್ತ್ರಗೊಳಿಸಿ, ನಗ್ನಸ್ಥಿತಿಯಲ್ಲಿರುವ ಅವರ ವೀಡಿಯೋ ಚಿತ್ರೀಕರಿಸಿ, ಚಾಕು ತೋರಿಸಿ ದರೋಡೆ ಮಾಡಿದ ಪ್ರಕರಣ ಇಲ್ಲಿನ ಬಂಜಾರಾಹಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಯನ್ನು ಅಫ್ರೀದಿ (24) ಎಂದು ಪೊಲೀಸರು ಗುರುತಿಸಿದ್ದು, ಈ ಮೊದಲು ಈತನನ್ನು ಮುಂಜಾಗ್ರತಾ ಕ್ರಮವಾಗಿ ಎರಡು ಬಾರಿ ಬಂಧಿಸಲಾಗಿತ್ತು. ಈತನ ವಿರುದ್ಧ ಸಲಿಂಗ ಜೋಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮಾಧಪುರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಟೆಕ್ಕಿಯೊಬ್ಬರು ಫೋನ್‍ ನಲ್ಲಿ ಗ್ರಿಂಡರ್ ಆ್ಯಪ್ ನೋಡುತ್ತಿದ್ದರು. ಆಗ ಅವರನ್ನು ಭೇಟಿ ಮಾಡುವ ಆಸಕ್ತಿ ವ್ಯಕ್ತಪಡಿಸಿದ ಅಫ್ರೀದಿ ಕಳುಹಿಸಿದ ಲೊಕೇಶನ್ ಬಳಸಿ ಬಂಜಾರಹಿಲ್‍ನ ಭೋಲಾ ನಗರಕ್ಕೆ ತೆರಳಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

"ಅಫ್ರೀದಿ ಮನೆಗೆ ತಲುಪಿದಾಗ ಚಾಕು ತೋರಿಸಿ ಬೆದರಿಸಿ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡ. ಬಳಿಕ ನನ್ನ ಬೆಳ್ಳಿಯ ಬ್ರಾಸ್ಲೆಟ್, ಸರ ಹಾಗೂ 2000 ರೂಪಾಯಿ ನಗದು ಕಿತ್ತುಕೊಂಡ" ಎಂದು ಹೇಳಿದ್ದಾರೆ.

ಪೊಲೀಸರು ಈ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಖೈರತಾಬಾದ್‍ನ 27 ವರ್ಷದ ಮತ್ತೊಬ್ಬ ವ್ಯಕ್ತಿ ಇಂಥದ್ದೇ ದೂರಿನೊಂದಿಗೆ ಠಾಣೆಗೆ ಬಂದಿದ್ದಾರೆ. ಈ ವ್ಯಕ್ತಿ ಬುಧವಾರ ರಾತ್ರಿ ಗ್ರಿಂಡರ್ ಆ್ಯಪ್‍ನಲ್ಲಿ ಅಫ್ರೀದಿಯ ವಿವರಗಳನ್ನು ನೋಡುತ್ತಿದ್ದಾಗ ಆತ ಲೊಕೇಶನ್ ಕಳುಹಿಸಿದ್ದಾನೆ. ಆತನ ಕೊಠಡಿಗೆ ತೆರಳಿದಾಗ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡಿದ್ದಲ್ಲದೇ ಆರೋಪಿ ತನ್ನ ಸ್ನೇಹಿತ ಹಾರೂನ್ ಎಂಬಾತನ ಸಹಾಯದಿಂದ ಚಿನ್ನದ ಉಂಗುರ, 7 ಸಾವಿರ ನಗದು ಕಿತ್ತುಕೊಂಡಿದ್ದಾರೆ. ಜತೆಗೆ ಫೋನ್‍ಪೇ ಮೂಲಕ ಮೊಹ್ಮದ್ ಒಮರ್ ಮೊಹಿಯುದ್ದೀನ್ ಎಂಬುವವರಿಗೆ 20 ಸಾವಿರ ರೂಪಾಯಿಯನ್ನು ಬಲವಂತವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News