ಲೈಂಗಿಕ ದೌರ್ಜನ್ಯ ಪ್ರಕರಣ | ನಟ, ಶಾಸಕ ಮುಕೇಶ್ ಬಂಧನ, ಜಾಮೀನು ಬಿಡುಗಡೆ
ತಿರುವನಂತಪುರಂ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದ, ಮಲಯಾಳಂ ಚಿತ್ರನಟ ಹಾಗೂ ಸಿಪಿಎಂ ಶಾಸಕ ಎಂ. ಮುಕೇಶ್ ಅವರನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆದರೆ ಕೆಲವು ತಾಸುಗಳ ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.
ಸಿಪಿಎಂ ಶಾಸಕರೂ ಆದ ಮುಕೇಶ್ ಅವರ ವಿರುದ್ಧ ಲೈಂಗಿಕ ಹಲ್ಲೆಯ ಆರೋಪಕ್ಕೆ ಸಂಬಂಧಿಸಿ ತ್ರಿಶೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆಯ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಮುಕೇಶ್ ಅವರನ್ನು ಮಂಗಳವಾರ ಬೆಳಗ್ಗೆ ಬಂಧಿಸಿತ್ತು. ದೂರುದಾರಳು, ನಟನ ವಿರುದ್ಧ ಎರ್ನಾಕುಳಂ ಪೊಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ದೂರೊಂದನ್ನು ದಾಖಲಿಸಿರುವುದಾಗಿ ವರದಿಯಾಗಿದೆ.
ಮಂಗಳವಾರ ಬಂಧಿತರಾದ ಬೆನ್ನಲ್ಲೇ ಮುಕೇಶ್ ಅವರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಪುರುಷತ್ವ ಪರೀಕ್ಷೆಯನ್ನು ನಡೆಸಲಾಯಿತು. ಆನಂತರ ಅವರನ್ನು ಸೆಶನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಧೀಶರು ನಿರೀಕ್ಷಣಾ ಜಾಮಿನಿನಲ್ಲಿ ಬಿಡುಗಡೆಗೊಳಿಸಿದರು. ಮುಕೇಶ್ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳಲ್ಲಿಯೂ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ತನ್ನ ಮೇಲಿನ ಆರೋಪಗಳನ್ನು ಮುಕೇಶ್ ಅವರು ಅಲ್ಲಗಳೆದಿದ್ದಾರೆ. ದೂರುದೂರಳ ಬ್ಲ್ಯಾಕ್ಮೇಲ್ ಬೆದರಿಕೆಗಳಿಗೆ ಮಣಿಯಲು ನಿರಾಕರಿಸಿದ್ದರಿಂದ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆಯೆಂದು ಆಪಾದಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿ ಕೇರಳ ಸರಕಾರ ರಚಿಸಿದ ಹೇಮಾ ಆಯೋಗದ ವರದಿ ಬಿಡುಗಡೆಗೊಂಡ ಬಳಿಕ ಮಲಯಾಳಂ ಚಿತ್ರರಂಗದ ಹಲವಾರು ಮಂದಿ ಲೈಂಗಿಕ ಶೋಷಣೆಯೆಸಗಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮುಕೇಶ್ ಅಲ್ಲದೆ, ನಟರಾದ ಜಯಸೂರ್ಯ, ಎಡವೆಲ್ಲಾ ಬಾಬು, ಚಿತ್ರ ನಿರ್ದೇಶಕರಾದ ರಂಜಿತ್ ಹಾಗೂ ವಿ.ಕೆ. ಪ್ರಕಾಶ್ ಅವರು ಆರೋಪಗಳನ್ನು ಎದುರಿಸುತ್ತಿದ್ದಾರೆ.