ಯುಎಪಿಎ ಅಡಿ ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ವಿರುದ್ಧ ಆರೋಪ ಹೊರಿಸಿದ ಎನ್‌ಐಎ ನ್ಯಾಯಾಲಯ
ಗುವಾಹಟಿ : ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಚಳವಳಿಯಲ್ಲಿ ಭಾಗಿಯಾದ ಆರೋಪದಲ್ಲಿ ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ಹಾಗೂ ಅವರ ಮೂವರು ಸಹವರ್ತಿಗಳ ವಿರುದ್ಧ ವಿಶೇಷ ಎನ್‌ಐಎ ನ್ಯಾಯಾಲಯ ಮಂಗಳವಾರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದೆ.
ವಿಶೇಷ ಎನ್‌ಐಎ ನ್ಯಾಯಾಧೀಶ ಎಸ್.ಕೆ. ಶರ್ಮಾ ಅವರು ಗೊಗೋಯಿ ವಿರುದ್ಧ ಯುಎಪಿಎಯ ಸೆಕ್ಷನ್ 18 (ಪಿತೂರಿ) ಹಾಗೂ ಐಪಿಸಿಯ 120ಬಿ (ಕ್ರಿಮಿನಲ್ ಪಿತೂರಿ), 153ಎ (ದ್ವೇಷದ ಪ್ರಚಾರ) ಹಾಗೂ 153 ಬಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ ಎಂದು ಗೊಗೋಯಿ ಪರ ನ್ಯಾಯವಾದಿ ಸಂತನು ಬೋರ್ತಕುರ್ ತಿಳಿಸಿದ್ದಾರೆ.
ಇನ್ನೊಂದೆಡೆ ಧೈಜ್ಯ ಕೊನ್ವರ್, ಬಿಟ್ಟು ಸೋನೋವಾಲ್ ಹಾಗೂ ಮಹೇಶ್ ಕೊನ್ವಾರ್ ವಿರುದ್ಧ ಯುಎಪಿಎಯ ಸೆಕ್ಷನ್ 18 ಹಾಗೂ ಐಪಿಸಿಯ ಸೆಕ್ಷನ್ 120ಬಿ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಿರುವುದಕ್ಕೆ ಸಂಬಂಧಿಸಿದ ಅಪರಾಧವನ್ನು ನಿರ್ವಹಿಸುವ ಯುಎಪಿಎಯ ಸೆಕ್ಷನ್ 39 ಹಾಗೂ ಎನ್‌ಐಎ ತನ್ನ ಆರೋಪ ಪಟ್ಯಿಯಲ್ಲಿ ಸಲಹೆ ನೀಡಿರುವ ಐಪಿಸಿಯ ಸೆಕ್ಷನ್ 124ಎ (ದೇಶದ್ರೋಹ) ಅನ್ನು ನ್ಯಾಯಾಲಯ ತಿರಸ್ಕರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗೊಗೋಯಿ, ‘‘ನಾವು ಜನರೊಂದಿಗೆ ಇದ್ದೇವೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ನಮ್ಮನ್ನ ಕಾರಾಗೃಹದಲ್ಲಿ ಇರಿಸಲು ಸರಕಾರ ಬಯಸುತ್ತಿದೆ. ಫ್ಯಾಸಿಸ್ಟ್ ಹಾಗೂ ಕೋಮವಾದಿ ಸರಕಾರದ ವಿರುದ್ಧ ಹೋರಾಡುವುದು ತ್ರಾಸದಾಯಕ ಹಾಗೂ ವೆಚ್ಚದಾಯಕ ವ್ಯವಹಾರ. ನಮ್ಮ ವಿರುದ್ಧ ಹೊರಿಸಿದ ಆರೋಪದ ವಿರುದ್ಧ ಎಲ್ಲಾ ನಾಲ್ವರು ಗುವಾಹಟಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲಿದ್ದೇವೆ’’ ಎಂದಿದ್ದಾರೆ.
ರಾಜ್ಯದಲ್ಲಿ 2019 ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಚಳವಳಿಯ ಸಂದರ್ಭ ನಡೆದ ಹಿಂಸಾಚಾರದಲ್ಲಿನ ಪಾತ್ರದ ಕುರಿತಂತೆ ಗೊಗೋಯಿ ಹಾಗೂ ಅವರ ಇತರ ಮೂವರು ಸಹವರ್ತಿಗಳ ವಿರುದ್ಧ ದಾಖಲಿಸಲಾದ ಎರಡು ಪ್ರಕರಣಗಳ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ.