ಲೈಂಗಿಕ ದೌರ್ಜನ್ಯ ಹಗರಣ | ಪ್ರತಿಭಟನೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎನ್ನುವವರು ‘‘ತಲೆ ಸರಿಯಿಲ್ಲದವರು’’

Update: 2024-08-22 14:06 GMT

 ಏಕನಾಥ ಶಿಂದೆ,  ಉದ್ಧವ್ ಠಾಕ್ರೆ | PC : PTI

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ನಾಲ್ಕು ವರ್ಷ ಪ್ರಾಯದ ಇಬ್ಬರು ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ‘‘ರಾಜಕೀಯ ದುರುದ್ದೇಶವಿದೆ’’ ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿಕೆ ನೀಡಿದ್ದಾರೆ; ಇಂಥ ಹೇಳಿಕೆಯನ್ನು ‘‘ತಲೆ ಸರಿಯಿಲ್ಲದ’’ ವ್ಯಕ್ತಿಯೋರ್ವ ಮಾತ್ರ ನೀಡಲು ಸಾಧ್ಯ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ಹೇಳಿದ್ದಾರೆ.

‘‘ಬದ್ಲಾಪುರ ಪ್ರತಿಭಟನೆಯ ಹಿಂದೆ ರಾಜಕೀಯವಿದೆ ಎಂದು ಭಾವಿಸುವವರು ಒಂದೋ ತಲೆ ಸರಿಯಿಲ್ಲದವರು ಅಥವಾ ಪಾತಕಿಗಳನ್ನು ಬೆಂಬಲಿಸುವವರು’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಶಿಂದೆಯ ಹೆಸರನ್ನು ಉಲ್ಲೇಖಿಸದೆ ಠಾಕ್ರೆ ಹೇಳಿದರು.

ಪ್ರತಿಭಟನೆಯ ವೇಳೆ, ಬದ್ಲಾಪುರ ರೈಲು ನಿಲ್ದಾಣ ಮತ್ತು ಪಟ್ಟಣದ ಇತರ ಭಾಗಗಳಲ್ಲಿ ನಡೆದ ಕಲ್ಲು ತೂರಾಟ ಘಟನೆಗಳಲ್ಲಿ ಕನಿಷ್ಠ 25 ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಬೆಳಗ್ಗಿನಿಂದ ಸಂಜೆವರೆಗೆ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ರೈಲು ಸಂಚಾರವನ್ನು ತಡೆದರು. ಅಂತಿಮವಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಆಗಿರುವ ಹೆಚ್ಚಳವನ್ನು ಪ್ರತಿಭಟಿಸಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಗಳನ್ನೊಳಗೊಂಡಿರುವ ಮೈತ್ರಿಕೂಟ ಮಹಾ ವಿಕಾಸ ಅಘಾಡಿ ಶನಿವಾರ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ.

‘‘ಬಂದ್ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮಹಿಳೆಯರ ರಕ್ಷಣೆಯು ಆದ್ಯತೆಯಾಗಿರಬೇಕು ಎನ್ನುವ ನಿಟ್ಟಿನಲ್ಲಿ ಜಾಗೃತಿ ಹುಟ್ಟಿಸುವುದಕ್ಕಾಗಿ ಬಂದ್‌ಗೆ ಕರೆ ನೀಡಲಾಗಿದೆ. ಅದು ಸರಕಾರವನ್ನು ಎಬ್ಬಿಸುವ ಉದ್ದೇಶವನ್ನೂ ಹೊಂದಿದೆ’’ ಎಂದು ಠಾಕ್ರೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News