ಮಹಾರಾಷ್ಟ್ರ: ಶಿವಾಜಿ ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ಬಂಧನ
ಮುಂಬೈ: ಇತ್ತೀಚೆಗೆ ಕುಸಿದುಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆಯ ರಚನಾ ಸಮಾಲೋಚಕ ಚೇತನ್ ಪಾಟೀಲ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜಕೋಟ್‌ನ ಮಲ್ವಾನ್‌ನಲ್ಲಿರುವ 35 ಅಡಿ ಎತ್ತರದ ಛತ್ರಪತಿ ಶಿವಾಜಿಯ ಪ್ರತಿಮೆ ಕುಸಿದ ಘಟನೆಗೆ ಸಂಬಂಧಿಸಿ ಸಿಂಧುದುರ್ಗ ಪೊಲೀಸರು ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಮೆಯ ಶಿಲ್ಪಿ ಜಯದೀಪ್ ಅಪ್ಟೆ ಇನ್ನೂ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಾಟೀಲ್ ಕೊಲ್ಹಾಪುರದವನಾಗಿದ್ದರೆ, ಜಯದೀಪ್ ಆಪ್ಟೆ ಥಾಣೆ ನಿವಾಸಿಯೆಂದು ತಿಳಿದುಬಂದಿದೆ. ಪಾಟೀಲ್‌ನನ್ನು ಕೊಲ್ಹಾಪುರ ಪೊಲೀಸರು ಶುಕ್ರವಾರ ನಸುಕಿನ ವೇಳೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಸಿಂಧುದುರ್ಗ, ಕೊಲ್ಹಾಪುರ ಹಾಗೂ ಥಾಣೆಯ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಮಲ್ವಾನ್‌ನಲ್ಲಿ ಶಿವಾಜಿ ಪ್ರತಿಮೆಯ ಕುಸಿತವು ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಲಿರುವ ಆ ರಾಜ್ಯದಲ್ಲಿ ಪ್ರತಿಮೆಯ ವಿವಾದವು ಏಕನಾಥ ಶಿಂಧೆ ನೇತೃತ್ವದ ಶಿವಸೇನಾ-ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳಿಗೆ ಅಸ್ತ್ರವಾಗಿದೆ.
ಆರೋಪಿ ಚೇತನ್ ಪಾಟೀಲ್ ಲೋಕೋಪಯೋಗಿ ಇಲಾಖೆಯ ಮೂಲಕ ಭಾರತೀಯ ನೌಕಾಪಡೆಗೆ ಶಿವಾಜಿ ಪ್ರತಿಮೆಯ ವೇದಿಕೆಯ ವಿನ್ಯಾಸವನ್ನು ಸಲ್ಲಿಸಿದ್ದ. ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 109,110, 125 318 ಹಾಗೂ 3(5) ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ನೌಕಾಪಡೆ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 4ರಂದು ಸಿಂಧದುರ್ಗ ಜಿಲ್ಲೆ ರಾಜಕೋಟ್‌ನಲ್ಲಿ ಉದ್ಘಾಟಿಸಿದ್ದರು.
ಬಲವಾಗಿ ಬೀಸುವ ಗಾಳಿಯಿಂದಾಗಿ ಪ್ರತಿಮೆಯ ಲೋಹವು ಸವೆದು ಅದು ಪತನಗೊಂಡಿರಬೇಕೆಂದು ಭಾರತೀಯ ನೌಕಾಪಡೆ, ಮಹಾರಾಷ್ಟ್ರ ಪೊಲೀಸರು ಹಾಗೂ ಪಿಡಬ್ಲ್ಯುಡಿಯು ನಡೆಸಿದ ಪ್ರಾಥಮಿಕ ಅಂದಾಜು ವರದಿ ತಿಳಿಸಿದೆ.