ಸಂಸತ್ತಿನಲ್ಲಿ ಜೈ ಸಂವಿಧಾನ ಎಂದು ಕೂಗಬಾರದೇ? : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನೆ

Update: 2024-06-27 17:12 GMT

ಪ್ರಿಯಾಂಕಾ ಗಾಂಧಿ  |  PC : PTI 

ಹೊಸದಿಲ್ಲಿ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸಂಸತ್ತಿನಲ್ಲಿ ಜೈ ಸಂವಿಧಾನ ಎಂದು ಘೋಷಣೆ ಕೂಗಬಾರದೇ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಆಡಳಿತ ಪಕ್ಷದ ಸದಸ್ಯರು ಅಸಾಂವಿಧಾನಿಕ ಪದಗಳನ್ನು ಆಡಿದಾಗ ತಡೆಯಲಿಲ್ಲ. ಆದರೆ, ಪ್ರತಿಪಕ್ಷದ ಸದಸ್ಯರು ಜೈ ಸಂವಿಧಾನ ಎಂದು ಘೋಷಿಸಿದಾಗ ಆಕ್ಷೇಪಿಸಲಾಯಿತು ಎಂದು ಅವರು ಹೇಳಿದರು.

18ನೆ ಲೋಕಸಭೆಯ ಸದಸ್ಯರಾಗಿ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಿಯಾಂಕಾ ಗಾಂಧಿ ಅವರು ಈ ಹೇಳಿಕೆ ನೀಡಿದ್ದಾರೆ. ಶಶಿ ತರೂರ್ ಅವರು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು ಹಾಗೂ ಜೈ ಹಿಂದ್ ಹಾಗೂ ಜೈ ಸಂವಿಧಾನ ಘೋಷಣೆಗಳೊಂದಿಗೆ ಪ್ರಮಾಣ ವಚನ ಪೂರ್ಣಗೊಳಿಸಿದ್ದರು.

ತರೂರ್ ಅವರ ಜೈ ಸಂವಿಧಾನ ಘೋಷಣೆಯನ್ನು ಪ್ರತಿಪಕ್ಷದ ಸದಸ್ಯರು ಪುನರಾವರ್ತಿಸಿದ್ದರು. ಆಗ ಸ್ಪೀಕರ್, ನೀವು ಈಗಾಗಲೇ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ ಎಂದು ಅವರಿಗೆ ನೆನಪಿಸಿದ್ದರು.

ಈ ಸಂದರ್ಭ ಹರ್ಯಾಣದ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರು ಇದಕ್ಕೆ ಸ್ವೀಕರ್ ಆಕ್ಷೇಪಿಸಬಾರದು ಎಂದು ವಾದಿಸಿದ್ದರು. ಪ್ರತಿಯಾಗಿ ಸ್ವೀಕರ್, ಯಾವುದನ್ನು ಆಕ್ಷೇಪಿಸಬಾರದು, ಯಾವುದನ್ನು ಆಕ್ಷೇಪಿಸಬೇಕು ಎಂಬ ಬಗ್ಗೆ ಸಲಹೆ ನೀಡಬೇಡಿ. ಕುಳಿತುಕೊಳ್ಳಿ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ತನ್ನ ಎಕ್ಸ್ ನ ಪೋಸ್ಟ್ನಲ್ಲಿ ಸಂಸತ್ತಿನಲ್ಲಿ ಜೈ ಸಂವಿಧಾನ ಎಂದು ಘೋಷಣೆಗಳನ್ನು ಕೂಗಬಾರದೇ ? ಸದನದಲ್ಲಿ ಆಡಳಿತ ಪಕ್ಷದ ಸದಸ್ಯರ ಅಸಾಂವಿಧಾನಿಕ ಹಾಗೂ ಅಸಂಸದೀಯ ಪದಗಳಿಗೆ ಆಕ್ಷೇಪ ವ್ಯಕ್ತವಾಗಿಲ್ಲ. ಆದರೆ, ಪ್ರತಿಪಕ್ಷದ ಸದಸ್ಯರು ಜೈ ಸಂವಿಧಾನ ಎಂದು ಘೋಷಣೆಗಳನ್ನು ಕೂಗಿದಾಗ ಆಕ್ಷೇಪ ವ್ಯಕ್ತವಾಯಿತು ಚುನಾವಣೆ ಸಂದರ್ಭ ಹೊರಹೊಮ್ಮಿದ ಸಂವಿಧಾನ ವಿರೋಧಿ ನಿಲುವು ಈಗ ಹೊಸ ರೂಪ ಪಡೆದುಕೊಂಡಿದೆ. ಇದು ನಮ್ಮ ಸಂವಿಧಾನವನ್ನು ದುರ್ಬಲಗೊಳಿಸಲು ಬಯಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News