ಸಿಕ್ಕಿಂ: ಪ್ರವಾಹಕ್ಕೆ ಸಿಲುಕಿ 10 ಮಂದಿ ಮೃತ್ಯು, 82 ಜನ ನಾಪತ್ತೆ
ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನ ಲ್ಹೋನಾಕ್ ಸರೋವರ ಬಳಿ ಮೇಘಸ್ಫೋಟದಿಂದ ಸರೋವರ ಉಕ್ಕಿ ಹರಿದ ಪರಿಣಾಮ ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, 10 ಮಂದಿ ಬಲಿಯಾಗಿದ್ದಾರೆ. ಭಾರತೀಯ ಸೇನೆಯ 23 ಯೋಧರು ಸೇರಿದಂತೆ ಘಟನೆಯಲ್ಲಿ 82 ಮಂದಿ ನಾಪತ್ತೆಯಾಗಿದ್ದಾರೆ. 14 ಸೇತುವೆಗಳು ಕುಸಿದಿದ್ದು, 3000 ಪ್ರವಾಸಿಗಳು ರಾಜ್ಯದ ವಿವಿಧೆಡೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇಘಸ್ಫೋಟ ಬುಧವಾರ ನಸುಕಿನಲ್ಲಿ ಸಂಭವಿಸಿದ್ದು, ರಭಸದ ನೀರು ರಾಜ್ಯದ ಅತಿದೊಡ್ಡ ಜಲವಿದ್ಯುತ್ ಯೋಜನೆ ಎನಿಸಿದ ಚುಂಗ್‍ತಂಗ್ ಅಣೆಕಟ್ಟಿನ ಒಂದು ಭಾಗವನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಅಣೆಕಟ್ಟಿನ ಕೆಳಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿತು ಎನ್ನಲಾಗಿದೆ. ಅಸ್ಸಾಂ ಸರ್ಕಾರ ಈ ದುರಂತವನ್ನು ವಿಕೋಪ ನಿರ್ವಹಣೆ ಕಾಯ್ದೆಯಡಿ ಪ್ರಾಕೃತಿಕ ವಿಕೋಪ ಎಂದು ಘೋಷಿಸಿದೆ.
ಈ ಭೀಕರ ಪರಿಸ್ಥಿತಿಯ ನಡುವೆಯೇ ಭಾರತೀಯ ಸೇನೆ ಸಂಜೆ ಹೇಳಿಕೆ ನೀಡಿ, ಸಿಂಗ್ಟಮ್ ಪಟ್ಟಣ ಬಳಿಕ ಬರ್ದಾಂಗ್‍ನಿಂದ 23 ಮಂದಿ ಸೈನಿಕರು ನಾಪತ್ತೆಯಾಗಿದ್ದಾರೆ ಎಂದು ಘೋಷಿಸಿದೆ. ಈ ಪೈಕಿ ಒಬ್ಬರನ್ನು ರಕ್ಷಿಸಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.
ತೀಸ್ತಾ ಅಣೆಕಟ್ಟಿನ 3ನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ 14 ಮಂದಿ ಇನ್ನೂ ಸುರಂಗದ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗನ್ ಜಿಲ್ಲೆ, ಗ್ಯಾಂಗ್ಟಕ್ ಜಿಲ್ಲೆಯ ದಿಕ್ಚು ಮತ್ತು ಸಿಂಗ್ಟಮ್, ಪಕ್ಯಾಂಗ್ ಜಿಲ್ಲೆಯ ರಂಗ್‍ಪೋ ನಗರಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಹಾಗೂ ನಾಪತ್ತೆಯಾಗಿದ್ದಾರೆ. ಉತ್ತರ ಅಸ್ಸಾಂನ ಬಹುತೇಕ ಕಡೆಗಳಲ್ಲಿ ಫೈಬರ್ ಕೇಬಲ್‍ಗಳು ಕೊಚ್ಚಿಕೊಂಡು ಹೋಗಿದ್ದು, ಮೊಬೈಲ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.